ಮಿಶನ್ ಉತ್ತರ ಪ್ರದೇಶ: ರಾಹುಲ್ ನಿವಾಸದಲ್ಲಿ ಪ್ರಿಯಾಂಕಾ ಸಭೆ

Update: 2019-02-05 17:43 GMT

ಹೊಸದಿಲ್ಲಿ,ಫೆ.5: ಸೋಮವಾರ ವಿದೇಶದಿಂದ ಭಾರತಕ್ಕೆ ಮರಳಿದ ಉತ್ತರ ಪ್ರದೇಶ ಪೂರ್ವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೊಸದಿಲ್ಲಿಯ ತುಘಲಕ್ ರಸ್ತೆಯಲ್ಲಿರುವ ರಾಹುಲ್ ಗಾಂಧಿಯ ನಿವಾಸದಲ್ಲಿ ಸಭೆ ನಡೆಸಿದರು.

ರಾಹುಲ್ ನಿವಾಸದಲ್ಲಿ ಇತರ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ ಪ್ರಿಯಾಂಕಾ ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶ ಪೂರ್ವದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಈ ವೇಳೆ ಯುಪಿ ಪಶ್ಚಿಮ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜ್ಯೋತಿರಾಧಿತ್ಯ ಸಿಂಧಿಯಾ, ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ ಬಬ್ಬರ್, ಕರ್ನಾಟಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರೂ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ 43 ಸ್ಥಾನಗಳ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. 204ರ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಕೇವಲ ಶೇ.8.4 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಗಿತ್ತು. ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. 2017ರ ಉತ್ತರ ಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ವಭಾಗದಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಜಯ ಗಳಿಸಿತ್ತು. ಹಾಗಾಗಿ ಈ ಬಾರಿ ಪ್ರಿಯಾಂಕಾ ಮುಂದೆ ಪಕ್ಷವನ್ನು ಮೂಲದಿಂದ ಮೇಲೆತ್ತುವ ಸವಾಲಿನ ಕೆಲಸವಿದೆ ಎಂದು ಪಕ್ಷದ ಹಿರಿಯ ನಾಯಕರು ಅಭಿಪ್ರಾಯಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ನಡೆಸುವ ಪ್ರವಾಸ ಮತ್ತು ಇತರ ಚುನಾವಣಾ ಕಾರ್ಯತಂತ್ರಗಳ ನೀಲಿನಕ್ಷೆಯನ್ನು ರಚಿಸಲಾಗಿದೆ. ಮೊದಲಿಗೆ 13 ರ್ಯಾಲಿಗಳನ್ನು ನಡೆಸಲು ಉದ್ದೇಶಿಸಲಾಗಿದ್ದರೂ ಪ್ರಿಯಾಂಕಾರ ಆಗಮನದ ನಂತರ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನಾಯಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News