ಸಾಕ್ಷರತೆ, ಸಹಿಷ್ಣುತೆ ಘೋಷಣೆಯೊಂದಿಗೆ ದೇಶದಲ್ಲಿ ಮೊದಲ ಮಾದರಿ ಭಾರತ ಯಾತ್ರೆ: ಸಿದ್ದೀಕ್ ಮೋಂಟುಗೋಳಿ

Update: 2019-02-05 18:04 GMT

ಪುತ್ತೂರು, ಫೆ. 5: ಸಾಕ್ಷರತೆ, ಸಹಿಷ್ಣುತೆ ಘೋಷಣೆಯೊಂದಿಗೆ ಎಸ್‍ಎಸ್‍ಎಫ್ ವತಿಯಿಂದ ನಡೆಸಲಾಗುತ್ತಿರುವ ಭಾರತ ಯಾತ್ರೆಯು 27 ದಿನಗಳ ಕಾಲ ನಡೆಯುತ್ತಿದ್ದು, ಈಗಾಗಲೇ ದೇಶ 21 ರಾಜ್ಯಗಳ ಸಂಚಾರ ಪೂರ್ಣಗೊಂಡಿದ್ದು, ಕೇರಳದಲ್ಲಿ 22 ರಾಜ್ಯಗಳನ್ನು ಸಂಚರಿಸಿ ಸಮಾರೋಪಗೊಳ್ಳಲಿದೆ. ಈತನಕ ಒಟ್ಟು 13ಸಾವಿರ ಕಿ.ಮೀ ಸಂಚರಿಸಲಾಗಿದೆ ಎಂದು ಎಸ್‍ಎಸ್‍ಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ತಿಳಿಸಿದರು.

ಅವರು ಮಂಗಳವಾರ ಸಂಜೆ ಎಸ್‍ಎಸ್‍ಎಫ್ ಹಿಂದ್ ಸಫರ್ ಭಾರತ ಯಾತ್ರೆ ಪುತ್ತೂರಿಗೆ ಆಗಮಿಸಿದ ಹಿನ್ನಲೆಯಲ್ಲಿ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆದ ಭಾರತ ಯಾತ್ರೆ ಸ್ವೀಕಾರ ಸಮಾರಂಭ ಮತ್ತು ಬ್ರಹತ್ ಸಮಾವೇಶದಲ್ಲಿ ಮುನ್ನುಡಿಯಾಗಿ ಮಾತನಾಡಿದರು. 

ಕಾಂತಪುರ ಎ.ಪಿ. ಉಸ್ತಾದ್‍ರವರ ನಿರ್ದೇಶದಲ್ಲಿ ನಡೆಯುತ್ತಿರುವ ಈ ಭಾರತ ಯಾತ್ರೆ ಮೋಜಿಗಾಗಿ ನಡೆಸುತ್ತಿಲ್ಲ. ಇದರಲ್ಲಿ ಸ್ಪಷ್ಟ ಉದ್ದೇಶ, ಗುರಿ ಹಾಗೂ ದೂರದೃಷ್ಟಿತ್ವವಿದೆ. ಅನಕ್ಷರಸ್ಥ ಸಮಾಜವನ್ನು ಸುಶಿಕ್ಷಿತ ಸಮಾಜವನ್ನಾಗಿ ರೂಪಿಸುವ ಧ್ಯೇಯದೊಂದಿಗೆ ದೇಶದಲ್ಲಿ ಮಾರಕವಾಗಿರುವ ಅಸಹಿಷ್ಣುತೆಯನ್ನು ತಡೆದು ಮಾನವ ಸಹೋದರತೆಯನ್ನು ಬೆಳೆಸುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಭಾರತ ಯಾತ್ರೆಯು ದೇಶದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ಯೋಜನೆಯೊಂದನ್ನು ರೂಪಿಸಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿದ್ದೇವೆ ಎಂದರು.

ದ.ಕ.ಜಿಲ್ಲಾ ಸಂಯುಕ್ತ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾ ನೆರವೇರಿಸಿದರು. ಉಮ್ಮರ್ ಸಖಾಫಿ ಎಡಪ್ಪಾಲಂ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶಿಕ್ಷಣ ಸಂತ ಹರೇಕಳ ಹಾಜಬ್ಬರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂತಹ ದೊಡ್ಡ ವ್ಯಕ್ತಿಗಳ ನಡುವೆ ನನ್ನಂತಹ ವ್ಯಕ್ತಿಯನ್ನು ಕರೆದು ಉದ್ಘಾಟನೆಯನ್ನು ಮಾಡಿಸಿರುವುದು ನನ್ನ ಮಟ್ಟಿಗೆ ತುಂಬಾ ಹೆಮ್ಮೆಯ ವಿಷಯವಾಗಿದೆ. ಅಕ್ಷರ ವಂಚಿತನಾಗಿದ್ದ ನಾನು ಶಿಕ್ಷಣದ ಅರಿವಿನ ಹಂಚಿಕೆಗಾಗಿ ಹಲವರಿಂದ ಸಹಾಯ ಪಡೆದುಕೊಂಡು ಶಾಲೆಯನ್ನು ಕಟ್ಟಿದ್ದೇನೆ. ಎಲ್ಲರೂ ಅಕ್ಷರ ಜ್ಞಾನವನ್ನು ಪಡೆದಲ್ಲಿ ಅನಕ್ಷರತೆ ಮಾತ್ರವಲ್ಲದೆ ಬಡತನವೂ ದೂರವಾಗಲಿದೆ. ಎಸ್‍ಎಸ್‍ಎಫ್ ವತಿಯಿಂದ ಸಾಕ್ಷರತೆಗಾಗಿ ನಡೆಸುವ ಯಾತ್ರೆ ಮಾನವೀಯ ಮೌಲ್ಯವನ್ನು ಪಡೆದ ಯಾತ್ರೆಯಾಗಿದ್ದು, ಈ ಸಂಘಟನೆ ಯಿಂದ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು ಎಂದರು. 

ಡಾ. ಫಾರೂಕ್ ನಈಮಿ, ಡಾ. ಶೌಕತ್ ಬುಕಾರಿ ಕಾಶ್ಮೀರ, ನೌಶದ್ ಆಲಂ ಮಿಸ್ಬಾಹಿ ಒರಿಸ್ಸಾ, ಸಾಬಿಕ್ ಅಹ್ಮದ್ ಲತೀಫೀ ಅಸ್ಸಾಂ, ಸೈಯದ್ ಸಾಜಿದ್ ಬುಖಾರಿ ಕಾಶ್ಮೀರ, ಸಾಜಿದ್ ಅಲೀ ಕಾಶ್ಮೀರ, ಎಸ್‍ಎಸ್‍ಎಫ್ ರಾಷ್ಟ್ರೀಯ ಕೋಶಾಧಿಕಾರಿ ಝುಹೈರುದ್ದೀನ್ ನೂರಾನಿ, ಎಸ್‍ಎಸ್‍ಎಫ್ ಕರ್ನಾಟಕ ರಾಜ್ಯ ಸುಪ್ರಿಂ ಕೌನ್ಸಿಲ್ ಚೇರ್‍ಮೆನ್ ಡಾ.ಎಂಎಸ್‍ಎಂ ಅಬ್ದುರ್ರಶೀದ್ ಝೈನಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಎಸ್‍ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಖಾಮಿಲ್ ಸಖಾಫಿ, ಯಾಕೂಬ್ ಮಾಸ್ತರ್, ರವೂಫ್ ಖಾನ್, ಉಮ್ಮರ್ ಸಖಾಫಿ ಯಡಪ್ಪಾಲ, ಅಬೂಬಕ್ಕರ್ ಮಜೂರ್, ಇಬ್ರಾಹಿಂ ಸಖಾಪಿ ಪುದ್ದೂರು, ಆದಂ ಹಾಜಿ ಪಡೀಲ್, ಹಮೀದ್ ಹಾಜಿ ಕೊಡುಂಗಾಯಿ, ಯೂಸುಫ್ ಗೌಸಿಯಾ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಎಸ್.ಎಂ. ಬಶೀರ್ ಹಾಜಿ ಶೇಖಮಲೆ, ಖಾಸಿಂ ಹಾಜಿ ಮಿತ್ತೂರು, ಖಾಸಿಂ ಹಾಜಿ ಪದ್ಮುಂಜ ಮತ್ತಿತರರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಮುಸ್ಲಿಂ ಜಮಾಅತ್‍ನ ಗೌರವ ಅಧ್ಯಕ್ಷರಾಗಿ ಆಯ್ಕೆಯಾದ ಫಝಲ್ ಕೋಯಮ್ಮ ತಂಙಳ್, ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿಟಿಎಂ ಅಸ್ಸಖಾಫ್ ತಂಙಳ್ ಮನ್ಶರ್, ಮೌಲಾನಾ ಶಕತ್ ಅಲೀ ಕಾಶ್ಮೀರ, ಡಾ. ಫಾರೂಕ್ ನಈಮಿ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಝುಹೈರುದ್ದೀನ್ ನೂರಾನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ನಗರದಲ್ಲಿ ಬ್ರಹತ್ ರ್ಯಾಲಿ: 

ಭಾರತ ಯಾತ್ರೆಯ ಅಂಗವಾಗಿ ಸಭಾ ಕಾರ್ಯಕ್ರಮಕ್ಕೆ ಮೊದಲು ದರ್ಬೆ ದುಗ್ಗಮ್ಮ ದೇರಣ್ಣ ಹಾಲ್ ಬಳಿಯಿಂದ ಕಿಲ್ಲೆ ಮೈದಾನದ ತನಕ ಮುಖ್ಯರಸ್ತೆಯಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು. ಜಾಥಾವನ್ನು ಎಸ್‍ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಖಾಮಿಲ್ ಸಖಾಫಿ ಅವರು ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಅಸ್ಸಖಾಫ್ ತಂಙಳ್ ಮನ್ಶರ್ ತಂಙಳ್‍ರವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಸಾವಿರಾರು ಮಂದಿ ಎಸ್‍ಎಸ್‍ಎಫ್ ಕಾರ್ಯಕರ್ತರು ಘೋಷಣೆ ಕೂಗುತ್ತಾ ರ್ಯಾಲಿಯಲ್ಲಿ ಸಾಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News