‘ರಂಗಭೂಮಿ ಏಳಿಗೆಗೆ ರಾಜ್ಯದಲ್ಲಿ ರಂಗಮಂದಿರ ಪ್ರಾಧಿಕಾರ ರಚಿಸಿ’
ಉಡುಪಿ, ಫೆ.6: ರಾಜ್ಯದಲ್ಲಿ ರಂಗಭೂಮಿ ಸದೃಢವಾಗಿ ಬೆಳೆಯಲು ಸರಕಾರ, ಪರಿಣಿತ ರಂಗತಜ್ಞರು ಹಾಗೂ ರಂಗದ ಕುರಿತು ತಾಂತ್ರಿಕ ಪರಿಣಿತರ ನ್ನೊಳಗೊಂಡ ರಂಗಮಂದಿರ ಪ್ರಾಧಿಕಾರವನ್ನು ರಚಿಸಲು ಮುಂದಾಗಬೇಕು ಎಂದು ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್ ಸಲಹೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಇಂದು ನುರಿತ ರಂಗತಜ್ಞರೊಂದಿಗೆ ಸಮಾಲೋಚನೆ ನಡೆಸದೇ ಕೋಟಿ ಕೋಟಿ ರೂ. ವ್ಯಯಿಸಿ, ವಿಧಾನಸೌಧದಂತೆ ಭವ್ಯವಾದ ರಂಗಮಂದಿರಗಳನ್ನು ನಿರ್ಮಿಸುತ್ತಿದೆ. ಇದರಲ್ಲಿ ನಾಟಕದಂಥ ರಂಗಕಲೆಗಳಿಗೆ ಸೂಕ್ತವಾದ ಧ್ವನಿ ವ್ಯವಸ್ಥೆಯಾಗಲೀ, ಬೆಳಕಿನ ವ್ಯವಸ್ಥೆಯಾಗಲೀ ಇರದೇ ಅದು ನಿರುಪಯುಕ್ತ ವಾಗುವುದೇ ಹೆಚ್ಚು ಎಂದರು.
ಇದಕ್ಕೆ ಬದಲು ಸರಕಾರ ಸೂಕ್ತ ನಿವೇಶನ ನೀಡಿದರೆ, ನುರಿತ ರಂಗತಜ್ಞರು, ಧ್ವನಿ-ಬೆಳಕಿನ ತಜ್ಞರ ಸಲಹೆ ಪಡೆದು ತಾಲೂಕು ಮಟ್ಟದಲ್ಲಿ 300-400 ಮಂದಿ ಪ್ರೇಕ್ಷಕ ಸಾಮರ್ಥ್ಯದ ರಂಗಮಂದಿರಗಳನ್ನು 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿ ಸಲು ಸಾಧ್ಯವಿದೆ ಎಂದು ಲೋಕೇಶ್ ವಿವರಿಸಿದರು.
ರಂಗ ಮಂದಿರಕ್ಕಾಗಿ ಕೋಟಿ ಕೋಟಿ ರೂ. ವ್ಯಯಿಸುವ ಅಗತ್ಯವಿಲ್ಲ. ರಂಗ ಮಂದಿರ ಕಲ್ಪನೆ, ಗ್ರೀನ್‌ರೂಮ್ ಹಾಗೂ ಧ್ವನಿವ್ಯವಸ್ಥೆಗಳ ಮಾಹಿತಿಯುಳ್ಳ ನುರಿತ ರಂಗ ತಜ್ಞರು ಸರಕಾರದಲ್ಲಿಲ್ಲ. ಇದಕ್ಕಾಗಿ ರಂಗಮಂದಿರ ಪ್ರಾಧಿಕಾರ ರಚನೆಯಾಗಬೇಕು. ರಂಗಮಂದಿರವನ್ನು ಯಾವುದೇ ಅಕಾಡೆಮಿಯಾಗಲಿ, ಲೋಕೋಪಯೋಗಿ ಇಂಜಿನಿಯರ್‌ಗಳು ನಿರ್ಮಿಸುವುದಲ್ಲ. ಪರಿಣಿತರು ಇದ್ದರೆ ತಾಲೂಕು ಮಟ್ಟದಲ್ಲಿ ಕೇವಲ 50 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣ ಸಾದ್ಯ ಎಂದರು.
ಸರಕಾರ ಇಂದು ಸಾವಿರ, ಎರಡು ಸಾವಿರ ಪ್ರೇಕ್ಷಕರಿಗಾಗಿ ರಂಗ ಮಂದಿರಗಳನ್ನು ನಿರ್ಮಿಸುತ್ತಿದೆ. ಇಲ್ಲಿ ನಾಟಕವೊಂದರ ಪ್ರದರ್ಶನವಾದರೆ 100 ಜನರೂ ಸೇರುವುದು ಕಷ್ಟ. ಸಭಾಂಗಣ ತುಂಬಿದಾಗ ಮಾತ್ರ ಕಲಾವಿದರಿಗೆ ತಮ್ಮ ಪ್ರದರ್ಶನ ನೀಡಲು ಹೆಚ್ಚಿನ ಆಸಕ್ತಿ ಬರುತ್ತದೆ. ಒಮ್ಮೆಗೆ 10 ಸಾವಿರ ಪ್ರೇಕ್ಷಕ ರನ್ನು ಸೇರಿಸಿ ಪ್ರದರ್ಶನ ನೀಡಲು ನಾಟಕ ಜಾತ್ರೆಯಲ್ಲ. ವೀಕ್ಷಣೆಗೆ ರಂಗಾಸಕ್ತರು ದೊಡ್ಡ ಸಂಖ್ಯೆಯಲ್ಲಿ ಬಂದರೆ 2 ದಿನಗಳ ಕಾಲ ಹೆಚ್ಚಿನ ಪ್ರದರ್ಶನ ನೀಡುವ ವ್ಯವಸ್ಥೆ ಮಾಡಿದರೆ ಆಯ್ತು ಎಂದರು.
ದಾಖಲೆಗಳ ಡಿಜಿಟಲೀಕರಣ: ನಾಟಕ ಅಕಾಡೆಮಿ ರಾಜ್ಯದಲ್ಲಿ ರಂಗಭೂಮಿ ಬೆಳವಣಿಗೆ ದೃಷ್ಟಿಯಿಂದ ಹಲವು ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ರಾಜ್ಯದ ರಂಗಭೂಮಿಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ರಂಗಭೂಮಿ ನಡೆದು ಬಂದ ದಾರಿಯ ದಾಖಲೆಗಳನ್ನು ಸಂಗ್ರಹಿಸುತಿದ್ದೇವೆ. ಅವುಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಲೋಕೇಶ್ ತಿಳಿಸಿದರು.
1940ರಲ್ಲಿ ಕೈಲಾಸಂ ಅವರು ನಾಟಕವೊಂದರಲ್ಲಿ ಕರ್ಣನ ಪಾತ್ರದಲ್ಲಿರುವ ೆಟೊ ಲಭ್ಯವಾಗಿದೆ. ಅದೇ ರೀತಿ ರಾಜ್ಯದ ಕಲಾಜ್ಯೋತಿ ತಂಡ ಹೊಸ ದಿಲ್ಲಿಯಲ್ಲಿ ನೀಡಿದ ‘ಬಹಾದ್ದೂರ್ ಗಂಡು’ ನಾಟಕವನ್ನು ವೀಕ್ಷಿಸಿದ ಪ್ರಧಾನಿ ಜವಾಹರಲಾಲ್ ನೆಹರು ಮೆಚ್ಚಿಕೊಂಡು ತಂಡವನ್ನು ತನ್ನ ಮನೆಗೆ ಕರೆಸಿ ಆತಿಥ್ಯ ನೀಡಿರುವ ದಾಖಲೆಗಳೂ ಸಿಕ್ಕಿವೆ. ಇತಿಹಾಸದ ನೆನಪುಗಳನ್ನು ಉಳಿಸಲು ದಾಖಲೀಕರಣಕ್ಕೆ ಮುಂದಾಗಿದ್ದೇವೆ ಎಂದರು.
ನಾಟಕ ರಚನಾ ಸ್ಪರ್ಧೆ: ರಂಗಭೂಮಿ ನಿಂತ ನೀರಾಗದಂತೆ ತಡೆಯಲು ಹೊಸ ನಾಟಕಗಳ ರಚನಾ ಸ್ಪರ್ಧೆಯನ್ನು ನಡೆಸುತಿದ್ದೇವೆ. ಕಳೆದ ವರ್ಷದ ಸ್ಪರ್ಧೆಗೆ 10 ನಾಟಕಗಳು ಬಂದಿದ್ದು, ಉತ್ತಮವಾದ ಐದು ನಾಟಕಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಿದ್ದೇವೆ. ಈ ಬಾರಿ ಹೊಸ ನಾಟಕಗಳನ್ನು ಆಹ್ವಾನಿಸಿದಾಗ ಸುಮಾರು 95 ನಾಟಕಗಳು ಬಂದಿವೆ. ಇವುಗಳನ್ನು ತೀರ್ಪುಗಾರರು ಪರಿಶೀಲಿಸುತಿದ್ದಾರೆ. ಮಾ.27ರ ವಿಶ್ವ ರಂಗಭೂಮಿ ದಿನದಂದು ಅತ್ಯುತ್ತಮ ನಾಟಕಗಳಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ. ಮೊದಲ ಬಹುಮಾನ 20,000ರೂ. ನಗದು ನೀಡಲಾಗುವುದು ಎಂದರು.
ಅಲ್ಲದೇ ರಂಗಭೂಮಿ ಕುರಿತ ಸಂಶೋಧನೆಗೂ ಒತ್ತು ನೀಡುತಿದ್ದು, ಇದಕ್ಕಾಗಿ 55 ಮಂದಿ ಯುವಕರನ್ನು ತಲಾ ಒಂದು ಲಕ್ಷ ರೂ.ಗಳ ಫೆಲೋಶಿಪ್‌ಗೆ ಆಯ್ಕೆ ಮಾಡಿದ್ದು, ಅವರು ವಿವಿಧ ವಿಷಯಗಳ ಕುರಿತು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಇವರಿಗೆ ಇದಕ್ಕಾಗಿ 5 ದಿನಗಳ ಕಾರ್ಯಾಗಾರ ಆಯೋಜಿಸಿ ತರಬೇತಿ ನೀಡಿದ್ದೇವೆ ಎಂದರು.
ಈಗ ಅವಸಾನದ ಅಂಚಿನಲ್ಲಿರುವ ವೃತ್ತಿರಂಗಭೂಮಿ ಕಂಪೆನಿಗಳತ್ತ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ರಾಜ್ಯದ 15 ಮಂದಿ ಯುವಕರನ್ನು ಆಯ್ಕೆ ಮಾಡಿ ಅವರಿಗೆ ತಿಂಗಳಿಗೆ 10,000ರೂ.ನಂತೆ ಶಿಷ್ಯವೇತನ ನೀಡಿ ಒಂದೊಂದು ವೃತ್ತಿ ನಾಟಕ ಕಂಪೆನಿಗೆ ಕಳುಹಿಸಿ ಅಲ್ಲಿ ಆರು ತಿಂಗಳು ದುಡಿಯುವಂತೆ, ಅದನ್ನು ಪುನರುಜ್ಜೀವನಗೊಳಿಸುವ ವ್ಯವಸ್ಥೆ ಮಾಡಿದ್ದೇವೆ. ಇದು ಯಶಸ್ವಿಯಾದರೆ ಮುಂದೆ 50 ಯುವಕರನ್ನು ಹೀೆ ಕಳುಹಿಸಲಾಗುವುದು ಎಂದರು.
ಗ್ರಾಮೀಣ ಭಾಗದಲ್ಲಿರುವ 4 ಥಿಯೇಟರ್‌ಗಳಿಗೆ ಮೂಲಭೂತ ಸೌಕರ್ಯ, ಸಲಕರಣೆ ನೀಡಲು 15 ಲಕ್ಷ ರೂ.ಗಳನ್ನು ತೆಗೆದಿರಿಸಿದ್ದೇವೆ. ಒಟ್ಟಿನಲ್ಲಿ ವೃತ್ತಿ ಕಂಪೆನಿಗಳತ್ತ ಜನರನ್ನು ಆಕರ್ಷಿಸಲು ಕೆಲವು ಕಾರ್ಯಕ್ರಮಗಳು ಅನುಷ್ಠಾನ ಗೊಳ್ಳುತ್ತಿದೆ ಎಂದರು.