ಮೆಸ್ಕಾಂನ ವಿದ್ಯುತ್ ದರ ಏರಿಕೆ ಪ್ರಸ್ತಾವನೆಗೆ ಭಾಕಿಸಂ ಆಕ್ಷೇಪ: ಮಂಗಳೂರು ಡಿಸಿ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆ
ಉಡುಪಿ, ಫೆ.6: ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳಂತೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಕೂಡಾ ತನ್ನ ಗ್ರಾಹಕರ ಮೇಲೆ ಪ್ರತಿ ಯೂನಿಟ್‌ಗೆ ಸರಾಸರಿ 1.38 ರೂ. ದರ ಏರಿಕೆಗೆ ಆಯೋಗದ ಮುಂದೆ ಅರ್ಜಿ ಸಲ್ಲಿಸಿದೆ. ಗ್ರಾಹಕರ ಮೇಲೆ ನಿಗದಿತ ಶುಲ್ಕದಲ್ಲಿ 10ರಿಂದ 100ರೂ. ವರೆಗೆ ಹಾಗೂ ಯುನಿಟ್ ದರದ ಮೇಲೆ 40 ಪೈಸೆಯಿಂದ 2.20ರೂ.ವರೆಗೆ ದರವನ್ನು ಏರಿಸುವಂತೆ ಆಯೋಗವನ್ನು ಕೋರಿದೆ.
ಈ ದರ ಏರಿಕೆಗೆ ಕಾರಣವಾಗಿ ಆರ್ಥಿಕ ವರ್ಷ 2020ಕ್ಕೆ ಹಿಂದಿನ ವರ್ಷಗಳ ನಷ್ಟವೆಲ್ಲಾ ಸೇರಿಸಿ 706.39 ಕೋಟಿ ರೂ. ಕೊರತೆ ಬೀಳಲಿದೆ, ದರ ಏರಿಕೆಯ ಮೂಲಕ ಈ ಕೊರತೆಯನ್ನು ಭರಿಸಿಕೊಳ್ಳಬೇಕಾಗಿದೆ ಎಂದು ಮೆಸ್ಕಾಂ ಹೇಳಿದೆ.
ಮೆಸ್ಕಾಂನ ದರ ಏರಿಕೆಯ ಈ ಪ್ರಸ್ತಾವನೆಯನ್ನು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಬಲವಾಗಿ ಆಕ್ಷೇಪಿಸಿದೆ. ಅಲ್ಲದೇ ಜಿಲ್ಲೆಯಿಂದ 100ಕ್ಕೂ ಹೆಚ್ಚು ಆಕ್ಷೇಪಗಳನ್ನು ಭಾಕಿಸಂ ಹಾಗೂ ವಿವಿಧ ಸಂಘಟನೆಗಳಿಂದ ಸಲ್ಲಿಸುವಂತೆ ಪ್ರಯತ್ನಿಸಿದೆ. ಇದಕ್ಕೆ ಭಾಕಿಸಂ ನೀಡಿರುವ ಕಾರಣ, ಮೆಸ್ಕಾಂ 2013 ರಿಂದ ಈವರೆಗೂ ಪ್ರತೀ ವರ್ಷ ಲಾಭದಲ್ಲಿದೆ. ಅದರ ಅಡಿಟೆಡ್ ಲೆಕ್ಕಪತ್ರದಂತೆ 2018ರಲ್ಲಿ ಕೂಡಾ 31.42 ಕೋಟಿ ರೂ. ಲಾಭಗಳಿಸಿದೆ. ರಾಜ್ಯದ ಇತರ ವಿದ್ಯುತ್ ಸರಬರಾಜು ಕಂಪನಿ ಹಾಗೂ ಸರಕಾರದಿಂದ ಮೆಸ್ಕಾಂಗೆ ಸುಮಾರು 1000 ಕೋಟಿ ರೂ. ಬರಲು ಬಾಕಿಯಿದೆ. ಭದ್ರಾವತಿಯ ಮೈಸೂರು ಪೇಪರ ಮಿಲ್ಸ್ ಕಾರ್ಖಾನೆಯಿಂದ ಕೂಡಾ 130.70 ಕೋಟಿ ರೂ.ಬರಲು ಬಾಕಿ ಯಿದೆ ಎಂದು ಭಾಕಿಸಂ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಸ್ಕಾಂ ಪ್ರತಿ ಯೂನಿಟ್ ವಿದ್ಯುತ್ ಖರೀದಿಗೆ ಬೆಸ್ಕಾಂಗಿಂತಲೂ ಹೆಚ್ಚಿನ ಹಣ ಪಾವತಿಸುತ್ತಿದೆ. ಬಿಟಿಪಿಎಸ್ ಶಾಖೋತ್ಪನ್ನದಿಂದ ಖರೀದಿಸುವ ವಿದ್ಯುತ್‌ಗೆ ಬೆಸ್ಕಾಂ ರೂ. 5.50 ಪಾವತಿಸಿದರೆ, ಮೆಸ್ಕಾಂ ಅದೇ ಯೂನಿಟ್‌ಗೆ ರೂ.7.65 ಪಾವತಿಸುತ್ತಿದೆ. ಉಡುಪಿಯ ಯುಪಿಸಿಎಲ್‌ನಿಂದ ಖರೀದಿಸುವ ವಿದ್ಯುತ್‌ಗೆ ಬೆಸ್ಕಾಂ ರೂ. 5.02 ಪಾವತಿಸಿದರೆ, ಮೆಸ್ಕಾಂ ರೂ. 5.71 ಪಾವತಿಸುತ್ತಿದೆ. ಪ್ರತಿ ವಿದ್ಯುತ್ ಖರೀದಿ ದರದಲ್ಲೂ ಮೆಸ್ಕಾಂನ ಪಾವತಿ ದರ ಹೆಚ್ಚು. ಇದರಿಂದ ಸುಮಾರು 500 ಕೋಟಿ ರೂ. ನಷ್ಟವನ್ನು ಮೆಸ್ಕಾಂ ಹೆಚ್ಚುವರಿಯಾಗಿ ಪಾವತಿಸಿ, ಅನ್ನು ಗ್ರಾಹಕರ ಮೇಲೆ ಹೊರಿಸಿದೆ.
ಮೆಸ್ಕಾಂ ನೌಕರರ ಕ್ಷೇಮಾಭಿವೃದ್ದಿ ನಿಧಿ, ಬೋನಸ್, ಇನ್ನಿತರ ಸೌಲ್ಯಗಳ ಹೊರೆಯನ್ನೂ ಗ್ರಾಹಕರ ಮೇಲೆ ಹೊರಿಸಿ, ಕೋಟ್ಯಂತರ ರೂ. ಆದಾಯದ ಕೊರತೆಯನ್ನು ತೋರಿಸಿದೆ. ಆಯೋಗ ಅನುಮತಿ ನೀಡಿದ್ದಕ್ಕಿಂತ ಹೆಚ್ಚು ಬಂಡವಾಳ ಹೂಡಿಕೆ ಮಾಡಿರುವುದಾಗಿ ಮೆಸ್ಕಾಂ ಹೇಳಿದೆ. ಗ್ರಾಹಕರಿಗೆ ನೀಡುವ ವಿದ್ಯುತ್‌ನಲ್ಲಿ ಯಾವುದೇ ಗುಣಮಟ್ಟದ ಸುದಾರಣೆ ಮಾಡದೇ, ನಷ್ಟವನ್ನು ಮಾತ್ರ ಹೆಚ್ಚು ಲೆಕ್ಕ ಹಾಕಿ ವಿದ್ಯುತ್ ದರ ಏರಿಕೆ ಕೇಳಿರುವ ಮೆಸ್ಕಾಂನ ಕ್ರಮ ಸರಿಯಲ್ಲ. ಇದರ ವಿರುದ್ದ ಆಯೋಗದ ಮುಂದೆ ದಾಖಲೆ ಸಹಿತ ವಾದ ಮಂಡಿಸಲಾಗುವುದು ಎಂದು ಭಾಕಿಸಂ ತಿಳಿಸಿದೆ.
ದರ ಏರಿಕೆ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಫೆ.7ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆಯನ್ನು ಕರೆದಿದ್ದು, ಅದರಲ್ಲಿ ಗ್ರಾಹಕರು ಹಾಗೂ ಸಾರ್ವಜನಿಕರು ಭಾಗವಹಿಸಿ, ವಿಚಾರ ಮಂಡಿಸಬಹುದಾಗಿದೆ. ಈ ಬಾರಿ ಗ್ರಾಹಕರಿಗೆ ಸಮರ್ಪಕ ಮಾಹಿತಿಯನ್ನು ಮೆಸ್ಕಾಂ ನೀಡದ ಕಾರಣ, ಆಕ್ಷೇಪ ಸಲ್ಲಿಸಲು ಸಾಧ್ಯವಾಗದಿದ್ದವರೂ ಕೂಡಾ ವಿಚಾರಣೆಯಲ್ಲಿ ಭಾಗವಹಿಸಿ, ವಾದ ಮಂಡಿಸಬಹುದೆಂದು ಆಯೋಗ ಸಂಘಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ ಎಂದು ಭಾಕಿಸಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.