ಲೈಟ್ ಫಿಶಿಂಗ್-ಬುಲ್‌ಟ್ರಾಲ್ ನಿಷೇಧಕ್ಕೆ ಹೈಕೋರ್ಟ್ ಅಸ್ತು
ಮಂಗಳೂರು, ಫೆ.6: ಪರ್ಸಿನ್ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲಿಂಗ್ ನಿಷೇಧಿಸಿ 2017ರ ನ.10ರಂದು ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಬುಧವಾರ ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಇದರೊಂದಿಗೆ ಕಳೆದ ವಾರ ಮೀನುಗಾರಿಕಾ ಬಂದರುಗಳಲ್ಲಿ ಸಾಂಪ್ರದಾಯಿಕ ಮೀನುಗಾರರು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಲೈಟ್ ಫಿಶಿಂಗ್ ವಿರುದ್ಧ ಸಾಂಪ್ರದಾಯಿಕ ದೋಣಿ ಮೀನುಗಾರರು ಮಂಗಳೂರು, ಮಲ್ಪೆ, ಗಂಗೊಳ್ಳಿ ಮತ್ತಿತರ ಕಡೆ ಪ್ರತಿಭಟನೆ ನಡೆಸಿದ್ದರು. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಯುತ್ತಿತ್ತು. ಹಲವು ಬಾರಿ ಮುಂದೂಡಲ್ಪಟ್ಟ ಪ್ರಕರಣದ ವಿಚಾರಣೆ ಬುಧವಾರ ನಡೆದು ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲಿಂಗ್ ಮಾಡದಂತೆ ಪರ್ಸಿನ್ ಹಾಗು ಬುಲ್‌ಟ್ರಾಲ್ ಬೋಟ್ ಮೀನುಗಾರರಿಗೆ ನ್ಯಾಯಾಲಯ ಆದೇಶ ಮಾಡಿದೆ.
ಲೈಟ್ ಫಿಶಿಂಗ್‌ನಿಂದ ಸಾಂಪ್ರದಾಯಿಕ ಮೀನುಗಾರರು ತೊಂದರೆಗೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಭಾರೀ ಹೋರಾಟ ನಡೆದಿತ್ತು. ಇದೀಗ ರಾಜ್ಯ ಹೈಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಮತ್ತೆ ಲೈಟ್ ಫಿಶಿಂಗ್ ಮಾಡಿದರೆ ಅವರ ವಿರುದ್ಧ ಮೀನುಗಾರಿಕಾ ಇಲಾಖೆಯು ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಆಧರಿಸಿ ನಾವು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಮೀನುಗಾರರ ಸಂಘಟನೆಯ ಮುಖಂಡರಾದ ನಿತಿನ್ ಕುಮಾರ್, ಅಲಿ ಹಸನ್ ಮತ್ತಿತರರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಚಿಕ್ಕವೀರ ನಾಯಕ ಹೈಕೋರ್ಟ್‌ನಲ್ಲಿ ಬುಧವಾರ ವಿಚಾರಣೆ ನಡೆದಿದ್ದು, ನಿಯಮ ಉಲ್ಲಂಘಿಸಿ ಲೈಟ್ ಫಿಶಿಂಗ್ ನಡೆಸದಂತೆ ಆದೇಶ ಹೊರ ಬಿದ್ದಿದೆ. ಹಾಗಾಗಿ ಪರ್ಸಿನ್ ಮೀನುಗಾರರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವಂತಿಲ್ಲ. ಈ ಬಗ್ಗೆ ಇಲಾಖೆಯೂ ತೀವ್ರ ನಿಗಾ ವಹಿಸಲಿದೆ ಎಂದಿದ್ದಾರೆ.