×
Ad

ಮಂಗನ ಕಾಯಿಲೆ: ಮಣಿಪಾಲಕ್ಕೆ ಡಬ್ಲುಎಚ್‌ಒ ತಂಡ ಭೇಟಿ

Update: 2019-02-06 21:46 IST

ಉಡುಪಿ, ಫೆ. 6: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಮಂಗನಕಾಯಿಲೆ ವ್ಯಾಪ್ತಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ) ತಂಡವೊಂದು ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

ಆರೋಗ್ಯ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ. ರಾಮಚಂದ್ರ ಬಾಯರಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಗಳೊಂದಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿದ ಈ ತಂಡ, ಮಂಗನ ಕಾಯಿಲೆಯ ಪರಿಸ್ಥಿತಿಯ ಕುರಿತಂತೆ ಅಧ್ಯಯನ ನಡೆಸಿತು.

ತಂಡ, ಶಿವಮೊಗ್ಗ ಜಿಲ್ಲೆಯ ವಿವಿದೆಡೆಗಳಿಂದ ಚಿಕಿತ್ಸೆಗಾಗಿ ಆಗಮಿಸಿ, ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಮಂಗನ ಕಾಯಿಲೆ ರೋಗಿಗಳಿರುವ ವಾರ್ಡುಗಳಿಗೂ ಭೇಟಿ ನೀಡಿ ಪರಿಶೀಲಿಸಿತು. ಬಳಿಕ ಮಾಹೆ ವಿವಿಯ ಕುಲಪತಿ ಡಾ.ವಿನೋದ್ ಭಟ್, ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರನ್ನು ಭೇಟಿ ಮಾಡಿ ಚರ್ಚಿಸಿತು.

ಅಲ್ಲದೇ ಮಣಿಪಾಲದಲ್ಲಿರುವ ವೈರಸ್ ಸಂಶೋಧನಾ ಕೇಂದ್ರಕ್ಕೂ (ಎಂಸಿವಿಆರ್) ಭೇಟಿ ನೀಡಿ, ಕೆಎಫ್‌ಡಿ ರೋಗದ ಕುರಿತಂತೆ ಹಾಗೂ ಇಲ್ಲಿನ ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ಕುರಿತಂತೆ ಅಲ್ಲಿನ ವಿಜ್ಞಾನಿ ಗಳೊಂದಿಗೆ ಸಮಾಲೋಚನೆ ನಡೆಸಿತು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಮಣಿಪಾಲದ ಎಂಸಿವಿಆರ್‌ನ ತಜ್ಞರ ತಂಡ ಇಂದು ಕಾವ್ರಾಡಿ, ಹೊಸಂಗಡಿ ಹಾಗೂ ಕಂಡ್ಲೂರು ಪ್ರದೇಶಗಳಲ್ಲಿ ಉಣ್ಣಿಯ ಸರ್ವೇಕ್ಷಣೆ ನಡೆಸಿದೆ. ಈಗಾಗಲೇ ಮಂಗನಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿರುವ ಪಿಎಚ್‌ಸಿ ಪ್ರದೇಶಗಳಲ್ಲಿ ಜ್ವರದಿಂದ ಬಾಧಿತರಾಗಿರುವವರ ಪತ್ತೆಗಾಗಿ ಸರ್ವೆ ಕಾರ್ಯ ನಡೆಯುತ್ತಿದೆ. ಮಂಗನಲ್ಲಿ ಕಾಣಿಸಿಕೊಂಡಿರುವ ಈ ವೈರಸ್ ಮನುಷ್ಯನಿಗೆ ಹರಡದಂತೆ ತಡೆಯುವಲ್ಲಿ ಗರಿಷ್ಠ ಮಟ್ಟದ ಪ್ರಯತ್ನವನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.

ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತೆ ಯರನ್ನು ಬಳಸಿಕೊಂಡು ಮನೆಮನೆ ಸರ್ವೆ, ಜನರಿಗೆ ಜಾಗೃತಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಮಕ್ಕಳಿಗೆ ಮಂಗನಕಾಯಿಲೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಇದರಲ್ಲಿ ಖಾಸಗಿ ವೈದ್ಯರು, ಕೆಎಂಸಿ ಮಣಿಪಾಲ, ಹಲವು ಸರಕಾರೇತರ ಸಂಸ್ಥೆಗಳು, ಸಂಘಟನೆಗಳು ತಮ್ಮೆಂದಿಗೆ ಕೈಜೋಡಿಸಿವೆ ಎಂದವರು ಹೇಳಿದರು.

ಡಿಎಂಪಿ ತೈಲ ವಿತರಣೆ: ಮಂಗನಲ್ಲಿ ಕಾಯಿಲೆ ಪತ್ತೆಯಾಗಿರುವ ಹಲವು ಪ್ರದೇಶಗಳಲ್ಲಿ ವಿವಿಧ ಸಂಘಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಜನರಿಗೆ ಜಾಗೃತಿ ಮೂಡಿಸುತ್ತಿವೆ. ಬೆಳ್ವೆಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, 300 ಬಾಟಲ್ ಡಿಎಂಪಿ ತೈಲವನ್ನು ಇಲಾಖೆಯಿಂದ ಖರೀದಿಸಿ, ಕಾಡು ಪ್ರದೇಶದಲ್ಲಿರುವ ಜನರಿಗೆ ವಿತರಿಸುತ್ತಿವೆ ಎಂದು ಡಾ. ಭಟ್ ತಿಳಿಸಿದರು. ಇಂದು ಬಸ್ರೂರು ಪಿಎಚ್‌ಸಿ ವ್ಯಾಪ್ತಿಯಲ್ಲೂ ತೈಲದ ಬಾಟಲಿಗಳನ್ನು ವಿತರಿಸಲಾಯಿತು.

4 ಮಂಗಗಳ ಶವ ಪತ್ತೆ:  ಬುಧವಾರ ಜಿಲ್ಲೆಯಲ್ಲಿ ನಾಲ್ಕು ಸತ್ತ ಮಂಗಗಳ ಶವ ಪತ್ತೆಯಾಗಿದೆ. ಮಾಳದ ಶಿರ್ಲಾಲು, ಬೆಳ್ಮಣ್‌ನಲ್ಲಿ, ಆವರ್ಸೆಯ ಹಿಲಿಯಾಣ ಹಾಗೂ ಕಂಡ್ಲೂರು ಪಿಎಚ್‌ಸಿ ವ್ಯಾಪ್ತಿಯ ವಲ್ತೂರುಗಳಲ್ಲಿ ಇಂದು ಒಂದೊಂದು ಮಂಗನ ಕಳೇಬರ ಪತ್ತೆಯಾಗಿದೆ. ಇವುಗಳಲ್ಲಿ ಹಿಲಿಯಾಣ ಮತ್ತು ಬೆಳ್ಮಣ್ ಮಂಗಗಳ ಅಟಾಪ್ಸಿ ನಡೆಸಲಾಗಿದೆ ಎಂದು ಡಾ.ಭಟ್ ತಿಳಿಸಿದರು.

ಒಬ್ಬರ ರಕ್ತ ಪರೀಕ್ಷೆ: ಇಂದು ಶಂಕಿತ ಮಂಗನಕಾಯಿಲೆಗಾಗಿ ಹಳ್ಳಿಹೊಳೆಯ ವ್ಯಕ್ತಿಯೊಬ್ಬರ ರಕ್ತವನ್ನು ಇಂದು ಪರೀಕ್ಷೆಗೊಳಪಡಿಸಿದರೂ, ಪರೀಕ್ಷೆಯಲ್ಲಿ ಸೋಂಕಿಲ್ಲದಿರುವುದು ಪತ್ತೆಯಾಯಿತು. ಹೀಗಾಗಿ ಜಿಲ್ಲೆಯಲ್ಲಿ ಇದುವರೆಗೆ 26 ಮಂದಿಯ ರಕ್ತವನ್ನು ಮಂಗನಕಾಯಿಲೆ ಸೋಂಕಿಗಾಗಿ ಪರೀಕ್ಷಿಸಿದ್ದು, ಯಾವುದರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.

ಮಣಿಪಾಲದಲ್ಲಿ 25 ಮಂದಿಗೆ ಚಿಕಿತ್ಸೆ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶಿವಮೊಗ್ಹ ಜಿಲ್ಲೆಯ 163 ಮಂದಿ ಶಂಕಿತ ಮಂಗನಕಾಯಿಲೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಇವರಲ್ಲಿ 62 ಮಂದಿ ಸೋಂಕು ಪತ್ತೆಯಾಗಿದೆ. 101 ಮಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ. ನಾಲ್ಕು ಮಂದಿಯ ವರದಿ ಇನ್ನೂ ಬರಬೇಕಾಗಿದೆ. 138 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿ ದ್ದರೆ 25 ಮಂದಿ ಈಗಲೂ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಕೆಎಂಸಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News