×
Ad

ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

Update: 2019-02-06 21:51 IST

ಮಂಗಳೂರು, ಫೆ.6: ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಲಿಗೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿರುವ ಪೊಲೀಸರು ಸುಲಿಗೆಗೈದ ಮೊಬೈಲ್, ನಗದು ಹಾಗೂ 8 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟ್ ಸಹಿತ 31,250 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಪುದು ಗ್ರಾಮದ ಕುಂಜತ್ತ್‌ಕಲ ನಿವಾಸಿ ಆರಿಫ್ (27) ಹಾಗೂ ಕುಂಬಳೆಯ ಅರಿಕ್ಕಾಡಿ ನಿವಾಸಿ ನಾಸಿರ್ (43)ಎಂದು ಗುರುತಿಸಲಾಗಿದೆ.

ಬೈಜು ಎಂಬವರು ತನ್ನ ಊರಾದ ಕೇರಳದ ಕಣ್ಣೂರಿಗೆ ತೆರಳಲು ನಗರದ ಸರ್ವಿಸ್ ಬಸ್ ನಿಲ್ದಾಣಕ್ಕೆ ತೆರಳಿದ್ದ ವೇಳೆ ಇಬ್ಬರು ಅಪರಿಚಿತರು ಬೈಜು ಅವರೊಂದಿಗೆ ಮಲೆಯಾಳಂ ಭಾಷೆಯಲ್ಲಿ ಪರಿಚಯ ಮಾಡಿಸಿಕೊಂಡು ರಿಕ್ಷಾದಲ್ಲಿ ದಕ್ಷಿಣ ಧಕ್ಕೆಯ ಬಳಿ ಕರೆದುಕೊಂಡು ಹೋಗಿ ಗೂಡ್ಸ್ ರೈಲುಗಳು ನಿಲ್ಲುವ ಜಾಗದಲ್ಲಿ ಆಟೋವನ್ನು ನಿಲ್ಲಿಸಿ ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೈಜು ಬಳಿ ಇದ್ದ ಮೊಬೈಲ್, 2,000 ರೂ. ಹಾಗೂ 8 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟನ್ನು ಬಲತ್ಕಾರವಾಗಿ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಬೈಜು ನೀಡಿದ ದೂರಿನಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪಿಗಳು ಬಂದರು ದಕ್ಷಿಣ ಧಕ್ಕೆಯ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಫಿಗಳನ್ನು ದಸ್ತಗಿರಿ ಮಾಡಿ ಸುಲಿಗೆ ಮಾಡಿದ ಸೊತ್ತುಗಳನ್ನು ವಶಪಡಿಸಿದರು.

ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಭಾಸ್ಕರ್ ವಿ. ಮಾರ್ಗದರ್ಶನದಲ್ಲಿ ಪ್ರಭಾರ ಇನ್‌ಸ್ಪೆಕ್ಟರ್ ಕೆ.ಎಂ. ಶರೀಫ್ ಮತ್ತು ಎಸ್ಸೈ ರಾಜೇಂದ್ರ ಹಾಗು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News