×
Ad

ಜಮ್ಮು-ಕಾಶ್ಮೀರ: ಉಗ್ರ ಸಂಘಟನೆ ತೆಹ್ರೀಕುಲ್ ಮುಜಾಹಿದೀನ್‌ಗೆ ನಿಷೇಧ

Update: 2019-02-06 22:05 IST

  ಶ್ರೀನಗರ, ಫೆ.6: ನಿರಂತರ ಭಯೋತ್ಪಾದನಾ ಕೃತ್ಯ ನಡೆಸುತ್ತಿರುವ ಜಮ್ಮು- ಕಾಶ್ಮೀರದ ಭಯೋತ್ಪಾದಕ ಸಂಘಟನೆ ತೆಹ್ರೀಕ್-ಉಲ್-ಮುಜಾಹಿದೀನ್‌ಗೆ ನಿಷೇಧ ವಿಧಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

‘ಕಾಶ್ಮೀರದ ವಿಮೋಚನೆಗಾಗಿ’ ಹೋರಾಡುತ್ತಿರುವುದಾಗಿ ಘೋಷಿಸಿರುವ ಸಂಘಟನೆಯು 1967ರ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ನು ಉಲ್ಲಂಘಿಸಿದೆ. ನಿರಂತರವಾಗಿ ಉಗ್ರ ಚಟುವಟಿಕೆ ನಡೆಸುತ್ತಿರುವ ಸಂಘಟನೆಯ ಸದಸ್ಯರು ವಿದೇಶದಲ್ಲಿರುವ ಕೆಲವರ ನಿಯಂತ್ರಣದಲ್ಲಿದ್ದು ಅವರಿಂದ ಹಣಕಾಸು ಹಾಗೂ ಕಾರ್ಯತಂತ್ರದ ನೆರವು ಪಡೆಯುತ್ತಿದ್ದಾರೆ. ಆದ್ದರಿಂದ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.

1990ರಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಯು ಗ್ರೆನೇಡ್ ದಾಳಿ, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರ ಲೂಟಿ ಮಾಡುವುದು, ಹಿಝ್ಬುಲ್ ಮುಜಾಹಿದೀನ್, ಲಷ್ಕರೆ ತಯ್ಯಬ ಮುಂತಾದ ಇತರ ಭಯೋತ್ಪಾದಕ ಸಂಘಟನೆಗಳಿಗೆ ನೆರವಾಗುವುದು, ಮೂಲಭೂತೀಕರಣ ಮತ್ತು ದೇಶದಲ್ಲಿ ಯುವಜನತೆಯನ್ನು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳಿಸುವುದು ಮುಂತಾದ ಕೃತ್ಯದಲ್ಲಿ ನಿರತವಾಗಿದೆ.

ಈ ಸಂಸ್ಥೆ ಹಲವಾರು ಭಯೋತ್ಪಾದಕ ದಾಳಿ ನಡೆಸಿರುವುದಾಗಿ ಜಮ್ಮು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಕಾಶ್ಮೀರದಲ್ಲಿ ಕಾಶ್ಮೀರಿ ಯುವಜನರಿಗಾಗಿ ಭಯೋತ್ಪಾದಕ ಕೃತ್ಯಗಳ ತರಬೇತಿ ಕೇಂದ್ರವನ್ನೂ ಈ ಸಂಘಟನೆ ನಡೆಸುತ್ತಿದೆ ಎಂದು ಗೃಹ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News