ಎನ್‌ಡಿಎ ತೊರೆಯುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ: ಸಂಗ್ಮ
ಶಿಲಾಂಗ್, ಫೆ.6: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆ 2016ರ ಕುರಿತು ಪ್ರತಿಕ್ರಿಯಿಸಿರುವ ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮ, ಎನ್‌ಡಿಎ ತೊರೆಯುವ ಬಗ್ಗೆ ತಮ್ಮ ನ್ಯಾಷನಲಿಸ್ಟ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಸೂಕ್ತ ಸಮಯದಲ್ಲಿ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಈ ಮಸೂದೆಯನ್ನು ಕೇಂದ್ರ ಸರಕಾರ ರಾಜ್ಯ ಸಭೆಯಲ್ಲಿ ಮಂಡಿಸಿದರೆ, ಎನ್ ಡಿಎಯಲ್ಲಿ ಮುಂದುವರಿಯಬೇಕೇ ಎಂಬ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಂಗ್ಮ ವರದಿಗಾರರಿಗೆ ತಿಳಿಸಿದ್ದಾರೆ. ಈ ವಿಷಯದಲ್ಲಿ ಪಕ್ಷಭೇದ ಮರೆತು ಎಲ್ಲಾ ರಾಜಕೀಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದು, ಮಸೂದೆಯನ್ನು ವಿರೋಧಿಸಿ ಮತ ಚಲಾಯಿಸುವಂತೆ ಅವರಿಗೆ ಮನವಿ ಮಾಡಿದ್ದೇವೆ. ಅಲ್ಲದೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮುಖಂಡರೊಂದಿಗೂ ಈ ವಿಷಯದಲ್ಲಿ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸಂಗ್ಮಾ ತಿಳಿಸಿದ್ದಾರೆ.
ರವಿವಾರ ಇತರ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಈಶಾನ್ಯ ಭಾರತದ ಜನತೆಯ ಭಾವನೆಗಳನ್ನು ಸರಕಾರ ನಿರ್ಲಕ್ಷ ಮಾಡುವುದಿಲ್ಲ ಎಂದು ಈ ಸಂದರ್ಭ ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಗ್ಮಾ ತಿಳಿಸಿದರು.
ಪ್ರಸ್ತಾವಿತ ಮಸೂದೆಯು ಈಶಾನ್ಯ ಭಾರತದ ಭೌಗೋಳಿಕ ಅಸಮತೋಲನಕ್ಕೆ ಕಾರಣವಾಗುವುದರಿಂದ ತಮ್ಮ ಪಕ್ಷ ಹಾಗೂ ಇತರ ಪ್ರಾದೇಶಿಕ ಪಕ್ಷಗಳು ಈ ಮಸೂದೆಯನ್ನು ವಿರೋಧಿಸುತ್ತವೆ ಎಂದು ಸಂಗ್ಮಾ ಹೇಳಿದ್ದಾರೆ.