ಮುಝಫ್ಫರ್‌ನಗರ ದಂಗೆ: ಇಬ್ಬರು ಯುವಕರ ಹತ್ಯೆ ಪ್ರಕರಣದಲ್ಲಿ 7 ಮಂದಿ ತಪ್ಪಿತಸ್ಥರು

Update: 2019-02-06 17:22 GMT

ಮುಝಫ್ಫರ್‌ನಗರ,ಫೆ.6: ಉತ್ತರ ಪ್ರದೇಶದಲ್ಲಿ 60 ಜನರ ಹತ್ಯೆಗೆ ಕಾರಣವಾದ 2013ರ ಮುಝಫ್ಫರ್ ನಗರ ದಂಗೆಯ ಕಿಡಿ ಹೊತ್ತಿಸಿದ್ದ ಇಬ್ಬರು ಯುವಕರ ಹತ್ಯೆಯ ಏಳು ಆರೋಪಿಗಳನ್ನು ಬುಧವಾರ ಸ್ಥಳೀಯ ನ್ಯಾಯಾಲಯ ತಪ್ಪಿತಸ್ಥರೆಂದು ತೀರ್ಪು ನೀಡಿದೆ.

2013ರ ಆಗಸ್ಟ್ 27ರಂದು ಮುಝಫ್ಫರ್ ನಗರದ ಕವಲ್ ಗ್ರಾಮದಲ್ಲಿ ಗೌರವ್ ಮತ್ತು ಸಚಿನ್ ಎಂಬ ಇಬ್ಬರು ಯುವಕರನ್ನು ಹತ್ಯೆ ಮಾಡಿದ ಆರೋಪದಲ್ಲಿ ಮುಝಮ್ಮಿಲ್, ಮುಜಸ್ಸಿಮ್, ಫುರ್ಖಾನ್,ನದೀಮ್,ಜನಂಗೀರ್, ಅಫ್ಝಲ್ ಮತ್ತು ಇಕ್ಬಾಲ್‌ರನ್ನು ತಪ್ಪಿತಸ್ಥರು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಿಮಾಂಶು ಭಟ್ನಗರ್ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಶುಕ್ರವಾರ ಘೋಷಿಸಲಿದೆ. ಪೊಲೀಸರು ದಾಖಲಿಸಿರುವ ಎಫ್‌ಐಅರ್ ಪ್ರಕಾರ, ಕವಲ್ ಗ್ರಾಮದ ಇಬ್ಬರು ಯುವಕರನ್ನು ಐದು ಜನರ ಗುಂಪು ಥಳಿಸಿ ಹತ್ಯೆ ಮಾಡಿತ್ತು.

ನಂತರ ವಿಚಾರಣೆಯ ವೇಳೆ ಹತ್ಯೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಅಪ್ಝಲ್ ಮತ್ತು ಇಕ್ಬಾಲ್ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಯಿತು. ಸರಕಾರಿ ಅಭಿಯೋಜಕರು ನೀಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, 2013ರ ಮುಝಫ್ಫರ್ ನಗರ ದಂಗೆಯ ಹಿನ್ನೆಲೆಯಲ್ಲಿ 6,000 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ದಂಗೆಗಳಲ್ಲಿ ಆರೋಪಿಗಳೆಂದು 1,480 ಮಂದಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣಗಳ ತನಿಖೆ ನಡೆಸಿದ ವಿಶೇಷ ತನಿಖಾ ತಂಡ 175 ಪ್ರಕರಣಗಳಲ್ಲಿ ದೋಷಾರೋಪ ಸಲ್ಲಿಸಿತ್ತು. 430 ಆರೋಪಿಗಳನ್ನೊಳಗೊಂಡ 56 ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದ್ದರೆ ಕೆಲವೊಂದು ಪ್ರಕರಣಗಳನ್ನು ಸರಕಾರ ಹಿಂಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News