ಬ್ಯಾರಿಗಳ ಆರ್ಥಿಕ ಸಬಲೀಕರಣವೇ ಬ್ಯಾರಿ ಮೇಳದ ಗುರಿ: ಮನ್ಸೂರ್ ಅಹ್ಮದ್ ಆಝಾದ್
ಮಂಗಳೂರು, ಫೆ. 6: ಬ್ಯಾರೀಸ್ ಚೇಂಬರ್‌ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ವತಿಯಿಂದ ಫೆ.8, 9 ಮತ್ತು 10ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿರುವ ‘ಬ್ಯಾರಿ ಮೇಳ- 2019’ಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಕಾರ್ಯಕ್ರಮದ ಯಶಸ್ಸಿಗಾಗಿ ಅಲ್ಲಲ್ಲಿ ವ್ಯಾಪಕ ಪ್ರಚಾರ ದೊಂದಿಗೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಉದ್ಯಮಿ, ‘ಆಝಾದ್ ಹಾರ್ಡ್ ವೇರ್’ನ ಮಾಲಕ ಮನ್ಸೂರ್ ಅಹ್ಮದ್ ಆಝಾದ್ ಬ್ಯಾರಿ ಮೇಳದ ಸಂಚಾಲಕ ರಾಗಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲಾ ಸ್ಟೀಲ್ ಟ್ರೇಡರ್ಸ್ ಅಸೋಸಿಯೇಶನ್ ಮತ್ತು ಕ್ರೆಸೆಂಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಪಾಂಡೇಶ್ವರದ ಫೌಝಿ ಜುಮಾ ಮಸ್ಜಿದ್‌ನ ಅಧ್ಯಕ್ಷರಾಗಿ, ಹಿದಾಯ ಫೌಂಡೇಶನ್ ಮತ್ತು ದ.ಕ. ಜಿಲ್ಲಾ ಮುಸ್ಲಿಂ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ, ‘ನಂಡೆ ಪೆಂಙಳ್’ ಅಭಿಯಾನದ ಪ್ರಧಾನ ಕಾರ್ಯದರ್ಶಿಯಾಗಿ, ಬಿಸಿಸಿಐನ ಕೋಶಾಧಿಕಾರಿಯಾಗಿ, ಝೀನತ್ ಬಕ್ಷ್ ಯತೀಂ ಖಾನಾ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಎಂ.ಫ್ರೆಂಡ್ಸ್, ಬದ್ರಿಯಾ ಶಿಕ್ಷಣ ಸಂಸ್ಥೆ, ಕರ್ನಿರೆ ಸಿವಿಎಲ್ ಸರ್ವಿಸಸ್ ಅಕಾಡಮಿ, ಮೆಲ್ಕಾರ್ ವುಮೆನ್ಸ್ ಕಾಲೇಜು... ಹೀಗೆ ಹತ್ತು ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಮನ್ಸೂರ್ ಅಹ್ಮದ್ ಮಂಗಳೂರಿನ ಪ್ರಮುಖ ಯುವ ಉದ್ಯಮಿಗಳಲ್ಲಿ ಓರ್ವರಾಗಿದ್ದಾರೆ. ಬ್ಯಾರಿ ಮೇಳದ ಬಗ್ಗೆ ಅವರು ‘ವಾರ್ತಾಭಾರತಿ’ ಯೊಂದಿಗೆ ಮಾತನಾಡಿದ್ದಾರೆ.
‘‘ಬಿಸಿಸಿಐ ಚಾರಿಟೇಬಲ್ ಸಂಸ್ಥೆಯಲ್ಲ. ಹಾಗಂತ ಬ್ಯಾರಿ ಸಮುದಾಯದ ಬಗ್ಗೆ ಕಾಳಜಿ ಇಲ್ಲವೆಂದಲ್ಲ. ಸಮುದಾಯವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದೇ ನಮ್ಮ ಉದ್ದೇಶ. ಅದೆಷ್ಟೋ ಯುವಕರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂಬ ಕನಸು ಇರುತ್ತದೆ. ಆದರೆ ಅದನ್ನು ನನಸಾಗಿಸುವುದು ಹೇಗೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಕೆಲವರಲ್ಲಿ ಹಣವಿರುತ್ತದೆ, ಉದ್ಯಮವನ್ನು ಮುನ್ನಡೆಸುವ ಛಾತಿ ಇರುವುದಿಲ್ಲ. ಇನ್ನು ಕೆಲವರಿಗೆ ಆರ್ಥಿಕವಾಗಿ ದುರ್ಬಲರಾಗಿದ್ದರೂ ಉದ್ಯಮಿಯಾಗಬೇಕು ಎಂಬ ಮಹದಾಸೆ ಇರುತ್ತದೆ. ಅಂತಹ ಯುವಕರನ್ನು ಒಗ್ಗೂಡಿಸುವುದು ಮತ್ತು ಸಂವಹನ ಸಾಧಿಸುವುದು ‘ಬಿಸಿಸಿಐ’ನ ಉದ್ದೇಶವಾಗಿದೆ. ‘ಬ್ಯಾರಿ ಮೇಳ’ ಆಯೋಜನೆಯಲ್ಲಿ ಈ ಅಂಶವೂ ಅಡಕವಾಗಿದೆ.
ಸದ್ಯ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗ ಭೀತಿ ಎದುರಾಗಿದೆ. ಇದು ಲಕ್ಷಾಂತರ ಬ್ಯಾರಿಗಳನ್ನು ಧೃತಿಗೆಡಿಸಿದೆ. ಗಲ್ಫ್‌ನಿಂದ ತವರಿಗೆ ಆಗಮಿಸಿದ ಹಲವರು ಮರಳಿ ಹೋಗಲಾಗದೆ ತತ್ತರಿಸುತ್ತಿದ್ದಾರೆ. ಇವರನ್ನೂ ಒಳಗೊಂಡಂತೆ ಉದ್ಯಮ ಸ್ಥಾಪಿಸಲು ಮುಂದೆ ಬರುವ ಯುವಕರನ್ನು ಗುರುತಿಸಿ ಕಾರ್ಯಾಗಾರದ ಮೂಲಕ ಸೂಕ್ತ ಮಾಹಿತಿ ನೀಡುವುದು, ಬಿಸಿನೆಸ್ ಫಂಡ್ ಮೂಲಕ ಆರ್ಥಿಕ ನೆರವು ನೀಡುವುದು, ಎನ್‌ಆರ್‌ಐ ಉದ್ಯಮಿಗಳ ಅನುಭವ ಹಂಚಿಸಿಕೊಳ್ಳುವಂತೆ ಮಾಡಿ ಅವರ ಸ್ಫೂರ್ತಿ ಸೆಲೆಯನ್ನು ಬಳಸಿಕೊಳ್ಳುವುದು ಕೂಡ ಬ್ಯಾರಿ ಮೇಳದ ಉದ್ದೇಶವಾಗಿದೆ. ವಾಣಿಜ್ಯೋದ್ಯಮ ಸ್ಥಾಪನೆಗೆ ಅವಕಾಶ ಕಲ್ಪಿಸುವುದಲ್ಲದೆ ಉತ್ತೇಜಿಸುವುದು, ವ್ಯಾಪಾರಕ್ಕೆ ಪ್ರೋತ್ಸಾಹಿಸುವುದು, ಉದ್ಯೋಗ-ವ್ಯಾಪಾರ ಅವಕಾಶ ಸೃಷ್ಟಿಯೂ ಮೇಳದ ಪ್ರಮುಖ ಗುರಿಯಾಗಿದೆ. ಇದರೊಂದಿಗೆ ವಸ್ತು ಪ್ರದರ್ಶನ, ಆಹಾರ ಸಹಿತ ವಿವಿಧ ಮಳಿಗೆಗಳ ಸ್ಥಾಪನೆ, ಬ್ಯಾರಿ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡುವುದು ಇತ್ಯಾದಿ ಮೇಳದಲ್ಲಿ ಅಡಕವಾಗಿದೆ.
ಬ್ಯಾರಿ ಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಮಾಹಿತಿ ಕಲೆ ಹಾಕಿ ಉದ್ಯಮದೊಂದಿಗೆ ಉದ್ಯೋಗವನ್ನೂ ಕಲ್ಪಿಸಿಕೊಡುವ ಉದ್ದೇಶದಿಂದ ‘ಬ್ಯಾರಿ ಉದ್ಯೋಗ ಮೇಳ’ ಆಯೋಜಿಸುವ ಗುರಿಯೂ ಇದೆ. ಅಲ್ಲದೆ, ಈ ಕಾರ್ಯಕ್ರಮ ಯಶಸ್ವಿಯಾದರೆ ಮುಂದೆ ‘ವಿಶ್ವ ಬ್ಯಾರಿ ಮೇಳ’ ಆಯೋಜಿಸುವ ಉದ್ದೇಶವೂ ಇದೆ.
*‘ಬಿಸಿಸಿಐ’ಯಲ್ಲಿ ಇದೀಗ 210 ಸದಸ್ಯರಿದ್ದಾರೆ. 33 ಮಂದಿಯ ಕಾರ್ಯಕಾರಿ ಸಮಿತಿಯೂ ಇದೆ. ಅಧ್ಯಕ್ಷರಾಗಿ ಎಸ್.ಎಂ.ರಶೀದ್ ಹಾಜಿ, ಉಪಾಧ್ಯಕ್ಷರಾಗಿ ಝಕರಿಯಾ ಜೋಕಟ್ಟೆ, ಅಬ್ದುರ್ರವೂಫ್ ಪುತ್ತಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಇಮ್ತಿಯಾಝ್, ಕಾರ್ಯದರ್ಶಿಗಳಾಗಿ ಅಶ್ರಫ್ ಕರ್ನಿರೆ ಮತ್ತು ಮುಹಮ್ಮದ್ ನಿಝಾರ್, ಕೋಶಾಧಿಕಾರಿಯಾಗಿ ಮನ್ಸೂರ್ ಅಹ್ಮದ್ ಕಾರ್ಯನಿರ್ವಹಿಸುತ್ತಿದ್ದಾರೆ.
ಬಡ್ಡಿರಹಿತ ಸಾಲ
ಚಿನ್ನಾಭರಣ ಅಥವಾ ಜಮೀನು ಅಡವಿಟ್ಟು ಕೆಲವರು ಬ್ಯಾಂಕ್, ಸೊಸೈಟಿ, ಫೈನಾನ್ಸ್ ಕಂಪೆನಿಯಿಂದ ಸಾಲ ಪಡೆದು ಉದ್ಯಮಕ್ಕಿಳಿಯುತ್ತಾರೆ. ಆದರೆ, ಕೆಲವರು ಗುರಿ ಸಾಧಿಸಿದರೆ ಇನ್ನು ಕೆಲವರು ಅತಂತ್ರರಾಗುತ್ತಾರೆ. ಸರ್ವ ಬ್ಯಾರಿಗಳನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸುವುದು ಬಿಸಿಸಿಐನ ಕನಸಾಗಿದೆ.ಅದಕ್ಕಾಗಿ ಬಿಸಿಸಿಐ ಬಡ್ಡಿರಹಿತವಾಗಿ 5 ಲಕ್ಷ ರೂ. ಸಾಲ ನೀಡುವ ಹೊಸ ಯೋಜನೆಯನ್ನು ಹಮ್ಮಿಕೊಂಡಿವೆ. ಈಗಾಗಲೇ ನಾಲ್ಕೈದು ಮಂದಿಗೆ ಸಾಲ ನೀಡಲಾಗಿದೆ. 30 ತಿಂಗಳಲ್ಲಿ ಈ ಹಣವನ್ನು ಮರಳಿಸಬೇಕು. ಹೀಗೆ ವರ್ಷದಲ್ಲಿ ಕನಿಷ್ಠ 25 ಮಂದಿಗೆ ತಲಾ 5 ಲಕ್ಷ ರೂ. ನಂತೆ ಬಡ್ಡಿರಹಿತ ಸಾಲ ನೀಡಿದಾಗ ಆರ್ಥಿಕವಾಗಿ ಸಶಕ್ತರಾಗಲು ಸಾಧ್ಯ. ಮುಂದೆ ಇದು ಚಕ್ರವ್ಯೆಹದಂತೆ ಮುಂದುವರಿಯಬೇಕು ಎಂಬುದು ನಮ್ಮ ಕನಸಾಗಿದೆ.
ಬ್ಯಾರಿ ಮೇಳಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗುತ್ತಿದೆ
ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಈ ‘ಬ್ಯಾರಿ ಮೇಳ’ ಸಂಪೂರ್ಣ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ನಮ್ಮ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗುತ್ತಿದೆ. ವ್ಯಾಪಾರ ಮಳಿಗೆಗಳಲ್ಲಿ ಬಿಲ್ಡರ್ ಮೆಟೀರಿಯಲ್ಸ್, ಹಾರ್ಡ್‌ವೇರ್ ಮೆಟೀರಿಯಲ್ಸ್, ಫರ್ನಿಚರ್ಸ್, ಪ್ಲೈವುಡ್ಸ್, ಹಣ್ಣು ಹಂಪಲುಗಳಲ್ಲದೆ ಪುಸ್ತಕಗಳು, ಬ್ಯಾರಿಗಳು ನಡೆಸುವ ಶಿಕ್ಷಣ ಸಂಸ್ಥೆಗಳ ಮಳಿಗೆಗಳಲ್ಲದೆ ಅತ್ತರ್-ಟೊಪ್ಪಿ ಇತ್ಯಾದಿ ಮಳಿಗೆಗಳೂ ಇಲ್ಲವೆೆ. 20 ಆಹಾರ ಮಳಿಗೆಗಳಲ್ಲದೆ ಒಟ್ಟು 100 ಮಳಿಗೆಗು ಜನಾಕರ್ಷಣೆಯ ಕೇಂದ್ರವಾಗಲಿದೆ.
ಎಸ್.ಎಂ.ರಶೀದ್ ಹಾಜಿ ಅಧ್ಯಕ್ಷರು, ಬಿಸಿಸಿಐ -ಮಂಗಳೂರು
ಫೆ.8ರಂದು ಸಂಜೆ 5ಕ್ಕೆ ಬ್ಯಾರಿ ಮೇಳ ಉದ್ಘಾಟನೆಗೊಳ್ಳಲಿದೆ. ಅಂದು ರಾತ್ರಿ 9ರವರೆಗೆ ಮತ್ತು ಫೆ.9 ಹಾಗೂ 10ರಂದು ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಮೇಳ ನಡೆಯಲಿದೆ. ಫೆ.9ರಂದು ಸಂಜೆ 4:30ರಿಂದ 7ರವರೆಗೆ ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’ ಎಂಬ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಫೆ.10ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ‘ದೇಶ ವಿದೇಶಗಳ ಯಶಸ್ವಿ ಉದ್ಯಮಿ’ಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ. ಮೂರು ದಿನ ಸಂಜೆಯೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.