ಶಿವರಾಮ ಕಾರಂತರು ಪ್ರಕೃತಿ ನಡುವಿನ ಶಿಕ್ಷಣವನ್ನು ಬಾಲವನದ ಮೂಲಕ ಸಾಕಾರಗೊಳಿಸಿದವರು: ಡಾ.ತಾಳ್ತಜೆ

Update: 2019-02-07 10:32 GMT

ಪುತ್ತೂರು, ಫೆ.7: ಶಾಂತಿನಿ ಕೇತನದ ರೂವಾರಿ ರವೀಂದ್ರನಾಥ ಠಾಗೂರ್ ಅವರಿಂದ ಪ್ರೇರಿತರಾದ ಡಾ.ಶಿವರಾಮ ಕಾರಂತರು ಪ್ರಕೃತಿ ನಡುವೆ ಶಿಕ್ಷಣವನ್ನು ಬಾಲವನದ ಮೂಲಕ ಸಾಕಾರಗೊಳಿಸಿದ್ದಾರೆ. ಅವರ ಎಲ್ಲಾ ಬರವಣಿಗೆಯಲಿ ಗಾಢವಾದ ಜೀವನಾನುಭವವಿದೆ ಎಂದು ಮುಂಬೈ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದ್ದಾರೆ.

ಅವರು ಗುರುವಾರ ಪುತ್ತೂರಿನ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಡಾ.ಶಿವರಾಮ ಕಾರಂತರ ಬಾಲವನ ಅಭಿವೃದ್ಧಿ ಸಮಿತಿ ಮತ್ತು ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆದ ‘ಶಿವರಾಮ ಕಾರಂತ ಅಧ್ಯಯನ ಶಿಬಿರ’ವನ್ನು ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಿದ್ದಾರೆ.

1935ರಲ್ಲಿ ಮೊಳಹಳ್ಳಿ ಶಿವರಾಯರ ಆಶಯದಲ್ಲಿ ಇಲ್ಲಿಗೆ ಆಗಮಿಸಿ ಬಾಲವನವನ್ನು ನಿರ್ಮಿಸಿರುವ ಡಾ.ಕಾರಂತರು 1973ರ ತನಕ ಇಲ್ಲಿಯೇ ನೆಲೆಸಿ ಇಲ್ಲಿನ ಪ್ರದೇಶ, ಶಾಲಾ ಶಿಕ್ಷಣ, ಬುಡಕಟ್ಟು ಸಮಾಜವನ್ನು ಅರಿತುಕೊಂಡವರು. ನಿರಂತರ ಸಂಚಾರ ಮಾಡುತ್ತಾ ಬಹೂದಕರಾಗಿ ಬಹುಮುಖಿ ಸಾಧನೆ ಮಾಡಿರುವ ಕಾರಂತರು ಯಾವುದೇ ವಿಶ್ವವಿದ್ಯಾನಿಲಯದ ಪದವಿ ಪಡೆದವರಲ್ಲ. ಅನುಭವದಲ್ಲಿ ಲೋಕವೆಂಬ ವಿಶ್ವವಿದ್ಯಾನಿಲಯದಿಂದ ಸಾಕಷ್ಟು ಪದವಿ ಪಡೆದವರು. ಅಲ್ಲದೆ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಅವರನ್ನು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ತಾನು ನಿಂತಿರುವ ನೆಲೆಯಲ್ಲಿಯೇ ವಿಶ್ವವನ್ನು ಪರಿಗಣಿಸಿರುವ ಕಾರಂತರ ಸಾಧನೆಯನ್ನು ಮುಂದಿನ ತಲೆಮಾರು ನಂಬುವುದೇ ಅಸಾಧ್ಯವಾಗಿದ್ದು, ಅಷ್ಟೊಂದು ಕ್ಷೇತ್ರದಲ್ಲಿ ಅವರು ಕೆಲಸ ಮಾಡಿದ್ದಾರೆ ಎಂದರು.

ಅವರು ಅಪಾರವಾದ ಜೀವನೋತ್ಸಾಹವನ್ನು ತನ್ನ ಬದುಕಿನಲ್ಲಿ ಅಂತಸ್ತೋತ್ರವಾಗಿ ಒಳ ಪ್ರವಾಹವಾಗಿ ಹರಿಸಿಕೊಂಡಿರುವುದು ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಿಂದ ಅರಿವಾಗುತ್ತದೆ. ಅವರ ‘ಮರಳಿ ಮಣ್ಣಿಗೆ’ ಕಾದಂಬರಿಯು ಇಂದಿನ ಪ್ರಸ್ತುತತೆಯಾಗಿದೆ. ಭಾವ ದೌರ್ಬಲ್ಯವಿಲ್ಲದ ಮರುಕ ಅವರ ಕಥಾ ಪಾತ್ರಗಳಲ್ಲಿದೆ ಎಂದರು.

ಸಾಮಾಜಿಕ ಪಿಡುಗುಗಳ ವಿರುದ್ಧವೂ ಧ್ವನಿಎತ್ತಿದ್ದ ಕಾರಂತರ ಬಾಲ್ಯ ವಿಧವೆಯರ ಸಮಸ್ಯೆಗಳ ಪರಿಹಾರದ ಬಗ್ಗೆಯೂ ಕೆಲಸ ಮಾಡಿದ್ದಾರೆ. ಅಲ್ಲದೆ ಬೇಡ್ತಿ ಚಳವಳಿಗೆ ಬೆಂಬಲ ನೀಡಿದ್ದರು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ತನಗೆ ಸಿಕ್ಕಿದ ರಾಷ್ಟ್ರ ಪ್ರಶಸ್ತಿಯನ್ನು ಹಿಂದಿರುಗಿಸಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಕಾರಂತರೂ ವಿವಾದಾತೀತರಲ್ಲ. ಅವರ ಬದುಕಿನ ಸಂಧ್ಯಾ ವೇಳೆಯಲ್ಲಿ ಪಠ್ಯ ಪುಸ್ತಕವೊಂದರ ಪಾಠದ ವಿಚಾರದಲ್ಲಿ ಅವರ ವಿರುದ್ದ ಆರೋಪಗಳು ವ್ಯಕ್ತವಾಗಿತ್ತು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಝೇವಿಯರ್ ಡಿಸೋಜ ಮಾತನಾಡಿ ಕಾರಂತರಂತಹ ಶ್ರೇಷ್ಠ ವ್ಯಕ್ತಿಗಳು ಓಡಾಡಿದ ಬಾಲವನದಲ್ಲಿ ಅವರ ಬಗ್ಗೆ ಹಿರಿಯ ವ್ಯಕ್ತಿಗಳಿಂದ ತಿಳಿದುಕೊಳ್ಳುವ ಅವಕಾಶಗಳು ವಿದ್ಯಾರ್ಥಿಗಳಿಗೆ ಒದಗಿರುವುದು ಅವರ ಪಾಲಿಗೆ ಅದೃಷ್ಟ ಎಂದರು.

ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜೋಸ್ಲಿನ್ ಪಿಂಟೋ ವಂದಿಸಿದರು. ಉಪನ್ಯಾಸಕ ಲಕ್ಷೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News