ಯಡಿಯೂರಪ್ಪರಿಂದ ಪ್ರಜಾಪ್ರಭುತ್ವಕ್ಕೆ ಅನ್ಯಾಯ-ಎಂ.ಬಿ. ಸದಾಶಿವ
ಪುತ್ತೂರು, ಫೆ. 7: ಅಧಿಕಾರದ ದುರಾಸೆಯಿಂದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಹುನ್ನಾರ ನಡೆಸುತ್ತಿರುವ ಯಡಿಯೂರಪ್ಪ ಅವರು ಪ್ರಜಾಪ್ರಭುತ್ವಕ್ಕೆ ಅನ್ಯಾಯ ಎಸಗುತ್ತಿದ್ದು, ಅವರ ವರ್ತನೆ ಖಂಡನೀಯವಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಹೇಳಿದರು.
ಅವರು ಗುರುವಾರ ಜೆಡಿಎಸ್ ಪಕ್ಷದ ವತಿಯಿಂದ ಇಲ್ಲಿಯ ಬಸ್ ನಿಲ್ದಾಣದ ಬಳಿ ಸಮ್ಮಿಶ್ರ ಸರಕಾರ ಉರುಳಿಸುವ ಹುನ್ನಾರ ನಡೆಸುತ್ತಿರುವ ಬಿಜೆಪಿ ಪಕ್ಷದ ಮುಖಂಡ ಯಡಿಯೂರಪ್ಪ ಅವರ ದುವರ್ತನೆಯನ್ನು ಖಂಡಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಅಧಿಕಾರದ ಆಸೆಗಾಗಿ ಯಡಿಯೂರಪ್ಪರು ಕೀಳು ಮಟ್ಟದ ರಾಜಕೀಯ ನಡೆಸುತ್ತಿದ್ದಾರೆ. ನ್ಯಾಯಾಂಗ, ಶಿಕ್ಷಣ ವ್ಯವಸ್ಥೆಗೆ ಹಂತ ಹಂತ ಹಂತವಾಗಿ ತೊಂದರೆ ನೀಡುತ್ತಿರುವ ಅವರ ವಿಧಾನಸಭೆಯಲ್ಲಿ ರಾಜ್ಯಪಾಲರಿಗೆ ಅಗೌರವ ನೀಡಿದ್ದಲ್ಲದೆ ಕೋಮುವಾದ ಸೃಷ್ಟಿಸಿ ಜನರಲ್ಲಿ ಭೀತಿ ಉಂಟು ಮಾಡುವ ಮೂಲಕ ಅಧಿಕಾರ ಪಡೆಯಲು ಹೊರಟಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಬಿಜೆಪಿ 28 ಸ್ಥಾನಗಳನ್ನು ಕಳೆದುಕೊಳ್ಳುವ ಭಯವಿದ್ದು, ತಾನು ಮೋದಿ ಕಂಗೆಣ್ಣಿಗೆ ಗುರಿಯಾಗುತ್ತಾನೆ ಎಂಬ ಭಯದಲ್ಲಿರುವ ಯಡಿಯೂರಪ್ಪ ಮೋದಿಗೆ ಹೆದರಿ 50 ಕೋಟಿ ಹಣ ನೀಡಿ ಶಾಸಕರನ್ನು ಖರೀದಿ ಮಾಡಲು ಹೊರಟಿದ್ದಾರೆ. ಈ ಕೋಟಿ ಹಣ ಎಲ್ಲಿಂದ ಬಂತು ಎಂಬುದನ್ನು ಅವರು ರಾಜ್ಯದ ಜನತೆಯ ಮುಂದಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರು ಯಡಿಯೂರಪ್ಪ ಅವರ ಭಾವಚಿತ್ರದ ಮುಂದೆ ಚಪ್ಪಲಿಯನ್ನು ಇಟ್ಟು ಪ್ರತಿಭಟನೆ ನಡೆಸಿದರು. ಬಳಿಕ ಯಡಿಯೂರಪ್ಪ ಅವರ ಭಾವ ಚಿತ್ರವನ್ನು ದಹನ ಮಾಡಿ ಅಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ, ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಯುನಿಕ್, ರಾಜ್ಯ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ಮಾಜಿ ಅಧ್ಯಕ್ಷ ಐ.ಸಿ.ಕೈಲಾಸ್, ಕಾರ್ಮಿಕ ಘಟಕದ ಅಧ್ಯಕ್ಷ ಮಹಾವೀರ ಜೈನ್, ಮುಖಂಡರಾದ ವಿಕ್ಟರ್ ಡಿಸೋಜ, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾ ಮಣಿಯನ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.