ಎಲ್‌ಇಡಿ ಲೈಟ್ ಬಳಕೆಗೆ ಮಾತ್ರ ನಿಷೇಧ: ಪರ್ಸಿನ್ ಮೀನುಗಾರರ ಸಂಘ
ಉಡುಪಿ, ಫೆ.7: ಕರ್ನಾಟಕವೂ ಸೇರಿದಂತೆ ಕರಾವಳಿಯ ಆಳ ಸಮುದ್ರ ಮೀನುಗಾರಿಕೆಯಲ್ಲಿ ಬೆಳಕು ಮೀನುಗಾರಿಕೆಯನ್ನು (ಲೈಟ್ ಫಿಶಿಂಗ್) ನಿಷೇಧಿಸಿ ರಾಜ್ಯ ಉಚ್ಛ ನ್ಯಾಯಾಲಯ ಬುಧವಾರ ಹೊರಡಿಸಿದ ನಿಷೇಧ ಕೇವಲ ಎಲ್‌ಇಡಿ ಬೆಳಕನ್ನು ಬಳಸಿ ನಡೆಸುವ ಮೀನುಗಾರಿಕೆಗೆ ಸೀಮಿತವಾಗಿದೆ ಎಂದು ಅಖಿಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘ ಪ್ರತಿಪಾದಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಗುರುದಾಸ ಬಂಗೇರ, ಬೆಳಕಿನ ಮೀನುಗಾರಿಕೆಗೆ ಅನುಮತಿ ನೀಡಿ ಕೇಂದ್ರ ಸರಕಾರ 2016ರ ಆಗಸ್ಟ್ 29ರಂದು ಹೊರಡಿಸಿ ಅಧಿಕೃತ ಆದೇಶದಲ್ಲಿ ಕೇವಲ ಎಲ್‌ಇಡಿ ಲೈಟ್ ಬಳಸಿ ನಡೆಯುವ ಮೀನುಗಾರಿಕೆಗೆ ಮಾತ್ರ ನ್ಯಾಯಾಲಯ ನಿಷೇಧ ಹೇರಿದೆ. ಈ ಆದೇಶದಲ್ಲಿ ತಿಳಿಸಿದ ಉಳಿದೆಲ್ಲಾ ಅಂಶಗಳು ಈಗಲೂ ಉಳಿದುಕೊಂಡಿದೆ ಎಂದರು.
ಕೇಂದ್ರ ಸರಕಾರ 2016ರ ಆ.29ರಂದು ಹೊರಡಿಸಿದ ಆದೇಶದಲ್ಲಿ ವಿಧಿಸಿರುವ ಎಲ್ಲಾ ಶರ್ತಗಳನ್ನು ನಾವು ಪಾಲಿಸುತಿದ್ದೇವೆ. ಕರಾವಳಿ ತೀರದಿಂದ 12 ನಾಟಿಕಲ್ ಮೈಲಿಗಿಂತ ಆಚೆ ನಾವು ಕೇವಲ ಮೇಲ್ಮೈ ಬೆಳಕನ್ನು ಉಪಯೋಗಿಸಿ ಮೀನುಗಾರಿಕೆ ನಡೆಸುತಿದ್ದೇವೆ. ಮರಿ ಮೀನುಗಳು ಬಲೆಗೆ ಬೀಳದಂತೆ ದೊಡ್ಡ ಕಣ್ಣಿನ ಬಲೆಗಳನ್ನೇ ಬಳಸುತಿದ್ದೇವೆ ಎಂದು ಅವರು ಹೇಳಿದರು.
ನ್ಯಾಯಾಲಯ ಫೆ.6ರಂದು ನೀಡಿದ ಆದೇಶದಲ್ಲಿ 2017ರ ಜ.10ರಂದು ಕೇಂದ್ರ ಸರಕಾರ ಹೊರಡಿಸಿದ ಆದೇಶದಲ್ಲಿ ಬೆಳಕಿನ ಮೀನುಗಾರಿಕೆಗೆ ಪರವಾನಿಗೆ ನೀಡಲು ಹಾಕಿದ ಎಲ್ಲಾ ಶರ್ತಗಳನ್ನು ಪಾಲಿಸುವವರಿಗೆ ಮೀನುಗಾರಿಕೆ ನಡೆಸಲು ಅರ್ಜಿದಾರರಿಗೆ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದೆ ಎಂದು ಗುರುದಾಸ ಬಂಗೇರ ವಿವರಿಸಿದರು.
ಲೈಟ್ ಫಿಶಿಂಗ್ ನಡೆಸುವಾಗ ನಾವು ಯಾವುದೇ ರೀತಿಯ ಎಲ್‌ಇಡಿ ಲೈಟ್‌ಗಳನ್ನು ಬಳಸುತ್ತಿಲ್ಲ. ನಾವು ನಿಷೇಧ ಹೇರದ ಮೆಟಲ್ ಹೆಲಾಯ್ಡಿ ಬೆಳಕು ಗಳನ್ನು ಮಾತ್ರ ಬಳಸುತಿದ್ದೇವೆ. ನಾವು ನೆಲದ ಮೇಲೆ ಎಲ್‌ಇಡಿ ಲೈಟ್, ನೀರಿನೊಳಗೆ ಎಲ್‌ಇಡಿ ಲೈಟ್‌ಗಳನ್ನು ಎಂದೂ ಬಳಸಿಲ್ಲ. ಹೀಗಾಗಿ ಈಗ ನಮಗೆ ನಮ್ಮ ಮೀನುಗಾರಿಕೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
2016ರಲ್ಲಿ ಕೇಂದ್ರ ಸರಕಾರವೇ ನೀಡಿದ ಆದೇಶಾನುಸಾರ ನಾವು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಗಳ ನೂರಾರು ಮಂದಿ ಮೀನುಗಾರರು ಕೋಟ್ಯಾಂತರ ರೂ. ಬಂಡವಾಳ ಹೂಡಿ ಯಾಂತ್ರಿಕೃತ ದೋಣಿ ಖರೀದಿಸಿ ಬೆಳಕಿನ ಮೀನುಗಾರಿಕೆ ನಡೆಸುತಿದ್ದೇವೆ. ಕೇಂದ್ರ ಸರಕಾರದ ಈ ನಿರ್ಧಾರದಿಂದ ಮೀನುಗಾರಿಕೆಯನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಗಳು ಇದರಿಂದ ಬೀದಿಗೆ ಬೀಳಲಿವೆ ಎಂದು ಅವರು ಹೇಳಿದರು.
ಆದುದರಿಂದ ಕೇಂದ್ರ ಸರಕಾರದ 2016ರ ಆ.29, 2017ರ ಜ.10, 2018ರ ಡಿ.21, 2019ರ ಜ.21 ಹಾಗೂ 2019ರ ಫೆ.6ರ ಆದೇಶಗಳಂತೆ ನಮಗೆ ಬೆಳಕು ಮೀನುಗಾರಿಕೆ ನಡೆಸಲು ಅನುಮತಿ ನೀಡುವಂತೆ ನಾವು ನ್ಯಾಯಾಲಯ ಹಾಗೂ ಕೇಂದ್ರ ಸರಕಾರಗಳಿಗೆ ಮನವಿ ಮಾಡುತ್ತಿರುವುದಾಗಿ ಗುರುದಾಸ ಬಂಗೇರ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ನವೀನ್ ಬಂಗೇರ, ರಮೇಶ್ ಕುಂದರ್, ಯಶೋಧರ ಅಮೀನ್, ಕೃಷ್ಣ ಎಸ್. ಸುವರ್ಣ, ನವೀನ್ ಕೋಟ್ಯಾನ್, ಚಂದ್ರಕಾಂತ್, ಸಂತೋಷ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.