×
Ad

ಫೆ.9: ಮಲ್ಪೆಯಲ್ಲಿ ‘ವಂದೇ ಮಾತರಂ’ ಹಾಡುಗಾರಿಕೆ ಸ್ಪರ್ಧೆ

Update: 2019-02-07 20:19 IST

ಉಡುಪಿ, ಫೆ. 7: ಕಳೆದ ವರ್ಷ 5000ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿ ಗಳಿಂದ ಸಂಪೂರ್ಣ ವಂದೇ ಮಾತರಂ ಹಾಡಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಬರೆದ ಉಡುಪಿಯ ಸಂವೇದನಾ ಫೌಂಡೇಷನ್ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ ಎಂದು ಫೌಂಡೇಷನ್‌ನ ಅಧ್ಯಕ್ಷ ಪ್ರಕಾಶ್ ಮಲ್ಪೆ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಫೆ.9ರ ಸಂಜೆ 4:30ರಿಂದ ಮಲ್ಪೆಯ ಕಡಲ ತೀರದಲ್ಲಿ 16 ರಾಜ್ಯಗಳಿಂದ 183 ಮಂದಿ ಸ್ಪರ್ಧಿಗಳು ವಿಭಿನ್ನ ರೀತಿಯ ರಾಗ ಸಂಯೋಜನೆಯ ಮೂಲಕ ‘ವಂದೇ ಮಾತರಂ’ನ್ನು ಹಾಡಲಿದ್ದಾರೆ ಎಂದರು.

ಅಂದು ರಾಷ್ಟ್ರ ಮಟ್ಟದ ಈ ಸ್ಪರ್ಧೆ ನಡೆಯಲಿದ್ದು, ಕೊನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ಈಗಾಗಲೇ ದೇಶಾದ್ಯಂತ ಬಂದ ಪ್ರವೇಶ ಪತ್ರಗಳಿಂದ ಅಂತಿಮ ಸುತ್ತಿಗೆ 12 ತಂಡಗಳನ್ನು ಆಯ್ಕೆ ಮಾಡಿದ್ದು, ಇವರು ಫೆ.9ರಂದು ತಮ್ಮ ಹಾಡನ್ನು ಪ್ರಸ್ತುತ ಪಡಿಸಲಿದ್ದಾರೆ.

ಅಂತಿಮ ಸುತ್ತಿನಲ್ಲಿ ಕರ್ನಾಟಕ, ಮಣಿಪುರ, ನಾಗಾಲ್ಯಾಂಡ್, ಕೇರಳ, ರಾಜಸ್ಥಾನ್ ತಂಡಗಳಿದ್ದು, ಈ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರಭಕ್ತಿಯ ಸುಧೆ ಹರಿಸಲಿದ್ದಾರೆ. ವಿಭಿನ್ನ ರಾಗ ಸಂಯೋಜನೆಯ ವಂದೇಮಾತರಂ ಹಾಡು ಅಂದು ಕೇಳಿಬರಲಿದೆ ಎಂದರು.

ಪ್ರಥಮ ಪ್ರಶಸ್ತಿ ವಿಜೇತರಿಗೆ 2 ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫಲಕ, ದ್ವಿತೀಯ ಪ್ರಶಸ್ತಿ ವಿಜೇತರಿಗೆ ಒಂದು ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫಲಕ ಅಲ್ಲದೇ ಉತ್ತಮ ಸಿನಿಮಾಟೋಗ್ರಫಿ, ಉತ್ತಮ ರಾಗಸಂಯೋಜನೆ, ಅತೀ ಹೆಚ್ಚು ಯೂಟ್ಯೂಬ್ ವೀಕ್ಷಣೆ ಪ್ರಶಸ್ತಿಗಳು 10,000 ರೂ.ನಗದಿಗೆ ವಿತರಣೆ ಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿಖಿಲ್ ಸಾಲ್ಯಾನ್, ಸುಜಿತ್ ಶೆಟ್ಟಿ, ಶೋಧನ್ ಮಲ್ಪೆ, ಕೌಶಿಕ್ ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News