×
Ad

ಮೋದಿ ಅಧಿಕಾರದಲ್ಲಿ ದೇಶ ಅಪಾಯದ ಸ್ಥಿತಿಯಲ್ಲಿದೆ-ಎಂ.ಬಿ. ಸದಾಶಿವ

Update: 2019-02-07 20:41 IST

ಪುತ್ತೂರು, ಫೆ. 7: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶ ಅಪಾಯದ ಸ್ಥಿತಿಯಲ್ಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಹೇಳಿದರು.

ಅವರು ಗುರುವಾರ ಪುತ್ತೂರಿನ ಪೂಜಾ ಹೋಟೆಲ್ ಸಭಾಂಗಣದಲ್ಲಿ ನಡೆದ ಜೆಡಿಎಸ್ ಪುತ್ತೂರು ಅಲ್ಪ ಸಂಖ್ಯಾತ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ನ್ಯಾಯಾಂಗ ವ್ಯವಸ್ಥೆ ಶಿಥಿಲವಾಗಿದ್ದು ನ್ಯಾಯಾಧೀಶರೇ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣ ವಾಗಿದೆ. ದೇಶದ ಸಂವಿಧಾನವನ್ನೇ ಬದಲಾಯಿಸಲು ಮುಂದಾಗಿರುವ ಈ ದೇಶದಲ್ಲಿ ಆರ್‍ಎಸ್‍ಎಸ್ ಚಿಂತನೆಗಳನ್ನು ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆ ನುಚ್ಚುನೂರಾಗಿದ್ದು, ಚರಿತ್ರೆಗಳನ್ನು ತಿರುಚುವುದರೊಂದಿಗೆ ಶಿಕ್ಷಣ ಕೇಸರೀಕರಣಗೊಂಡಿದೆ. ಈ ಎಲ್ಲಾ  ಕಾರಣಗಳಿಂದಾಗಿ ಕೇಂದ್ರದಲ್ಲಿ ಇನ್ನೊಮ್ಮೆ ಮೋದಿ ಸರಕಾರ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದರು.

ಬಿಜೆಪಿಯನ್ನು ರಾಜ್ಯದಲ್ಲಿ ನಿಗ್ರಹಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದೆ. ಇಲ್ಲಿ ಅಧಿಕಾರ ಎಂಬುದು ಮುಖ್ಯವಲ್ಲ ರಾಜ್ಯದ ಜನತೆಗೆ ನ್ಯಾಯ ಒದಗಿಸುವುದು ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದರೂ ಜೆಡಿಎಸ್ ಪಕ್ಷದ ಚಿಂತನೆ ಹಾಗೂ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟ ಪಡಿಸಿದರು.

ಪಕ್ಷದ ಸಂಘಟನೆಗಾಗಿ ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು. ಯಾವುದೇ ಪ್ರಚೋದನೆ, ಪ್ರಲೋಭನೆಗೆ ಒಳಗಾಗದೆ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕು ಎಂದ ಅವರು ಅಲ್ಪ ಸಂಖ್ಯಾತರ ರಕ್ಷಣೆಗಾಗಿ ಪಕ್ಷ ಸದಾ ಸಿದ್ದವಾಗಿದೆ ಎಂದರು.  

ಜೆಡಿಎಸ್ ರಾಜ್ಯ ಜಂಟೀ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ ಪಕ್ಷದ ಸಂಘಟನೆಗಾಗಿ ಈಗಾಗಲೇ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಜೆಡಿಎಸ್ ಸರಕಾರ 5 ವರ್ಷ ಅಧಿಕಾರವನ್ನು ಪೂರೈಸಲಿದೆ ಈ ವಿಚಾರದಲ್ಲಿ ಯಾವುದೇ ಅಪನಂಬಿಕೆ ಬೇಡ. ಫೆ. 8ರಂದು ರಾಜ್ಯ ಸರಕಾರ ಬಜೆಟ್ ಮಂಡಿಸಲಿದೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ಜನತೆಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕೇಂದ್ರದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಗಡಿಯಲ್ಲಿ ಸೈನಿಕರ ಹತ್ಯೆ ಕಡಿಮೆಯಾಗಿಲ್ಲ, ಸ್ವಚ್ಚಭಾರತ ಇನ್ನೂ ಪೂರ್ಣಗೊಂಡಿಲ್ಲ. ಈ ಎಲ್ಲಾ ಕಾರಣಗಳಿಂದ ಮೋದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಭೆಯಲ್ಲಿ ಜೆಡಿಎಸ್ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ, ಮಾಜಿ ಅಧ್ಯಕ್ಷ ಐ.ಸಿ. ಕೈಲಾಸ್, ಮುಖಂಡರಾದ ಸೈಯದ್ ಮೀರಾ ಸಾಹೀಬ್, ಕರೀಂ ಪಳ್ಳತ್ತೂರು, ಆರ್.ಕೆ. ರಾಧಾಕೃಷ್ಣ ಸಾಲ್ಯಾನ್, ಹಾರೂನ್ ರಶೀದ್, ಜಯರಾಜ್ ಅಮೀನ್, ಪದ್ಮಾ ಮಣಿಯಾಣಿ, ಕೈರುನ್ನೀಸಾ, ಜಾಫರ್‍ಖಾನ್, ಫಾರೂಕ್, ಮಹಾವೀರ್ ಜೈನ್, ಹರಿಪ್ರಸಾದ್ ಕಡಬ, ಗಂಗಾಧರ ಗೌಡ ಮಲ್ಲಾರ, ಇಬ್ರಾಹಿಂ ಕಲ್ಲರ್ಪೆ, ಪ್ರಿಯಾ ಸಾಲ್ಯಾನ್, ಅಬ್ದುಲ್ ಖಾದರ್ ಜಾಲಗದ್ದೆ ಮತ್ತಿತರರು ಉಪಸ್ಥಿತರಿದ್ದರು. 

ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಯೂನಿಕ್ ರಹಿಮಾನ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News