×
Ad

‘ಇಂಗು ಗುಂಡಿ’ ನಿರ್ಮಾಣದ ಮೂಲಕ ಮಾದರಿಯಾದ ಗ್ರಾಪಂ ಸದಸ್ಯೆ ಆಯಿಶಾ

Update: 2019-02-07 21:52 IST

ಮಂಗಳೂರು, ಫೆ. 7: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಎಸ್‌ಡಿಪಿಐ ಬೆಂಬಲಿತ ಬಜ್ಪೆ ಗ್ರಾಪಂ ಸದಸ್ಯೆ ಆಯಿಶಾ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮನೆಮಂದಿ ಉಪಯೋಗಿಸಿದ ಕೊಳಚೆ ನೀರುಗಳನ್ನು ಎಲ್ಲೆಂದರಲ್ಲಿ ಹರಿಯಬಿಡುವುದರಿಂದ ಪರಿಸರ ಮಾಲಿನ್ಯವಾಗುವುದನ್ನು ಮನಗಂಡ ಆಯಿಶಾ ಇಂಗುಗುಂಡಿ ನಿರ್ಮಾಣಕ್ಕೆ ಮುಂದಾದರು.

ಆಯಿಶಾ ಸ್ವತಃ ತಾನೇ ನೇತೃತ್ವ ವಹಿಸಿಕೊಂಡು ತನ್ನ ಆಸುಪಾಸಿನ 21 ಮನೆಗಳಿಗೆ ಉದ್ಯೋಗ ಖಾತರಿ ಯೋಜನೆಯ ಚೀಟಿ ಮಾಡಿಸಿಕೊಟ್ಟರೆ ಇಂಗು ಗುಂಡಿ ನಿರ್ಮಾಣಕ್ಕೆ ಪ್ರೇರಣೆ ನೀಡಿ ಪ್ರಶಂಸೆಗೆ ಪಾತ್ರರಾದರು. ಅಷ್ಟೇ ಅಲ್ಲ, ವಾರ್ಡಿನ ಜನರಲ್ಲೂ ಈ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯಿಶಾ ‘ನನ್ನ ಈ ಕೆಲಸಕ್ಕೆ ಗ್ರಾಪಂ ಪಿಡಿಒ, ಎಸ್‌ಡಿಪಿಐ ನಾಯಕರು ಮತ್ತು ಕಾರ್ಯಕರ್ತರು ಹಾಗೂ ವಾರ್ಡಿನ ಜನರು ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ್ದಾರೆ. ಅವರ ಸಹಕಾರದಿಂದಲೇ ನಾನು ‘ಇಂಗುಗುಂಡಿ’ಯನ್ನು ನಿರ್ಮಿಸಲು ಸಾಧ್ಯವಾಯಿತು’ ಎಂದರು.

‘ಪ್ರತಿಯೊಂದು ಇಂಗುಗುಂಡಿ ನಿರ್ಮಾಣಕ್ಕೆ ಸುಮಾರು 14 ಸಾವಿರ ರೂ. ವ್ಯಯಿಸಲಾಗಿದೆ. ಈ ಯೋಜನೆ ಹೊಸತೇನೂ ಅಲ್ಲ. ಆದರೆ, ಆ ಬಗ್ಗೆ ಜನರಿಗೆ ಮಾಹಿತಿ ಇರಲಿಲ್ಲ. ನಾವು ದಿನನಿತ್ಯ ಬಳಸಿದ ನೀರು ಕೊಳಚೆ ನೀರಾಗಿ ಎಲ್ಲೆಂದರಲ್ಲಿ ಹರಿದು ನಿಲ್ಲುವುದರಿಂದ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳಿಗೆ ಹೇತುವಾಗುತ್ತಿತ್ತು. ಅದನ್ನು ತಪ್ಪಿಸಲು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡೆವು’ ಎಂದು ಆಯಿಶಾ ತಿಳಿಸಿದ್ದಾರೆ.

ಕಳೆದ ವರ್ಷ ಇದೇ ಯೋಜನೆಯಡಿ ರಸ್ತೆ ಕಾಂಕ್ರಿಟೀಕರಣ ಮಾಡಿಸಿದ್ದ ತಾನು ‘ಸ್ವಚ್ಛ ಭಾರತ’ ಮಾಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಗು ಗುಂಡಿಗಳನ್ನು ತೋಡಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ ಎಂದು ಆಯಿಶಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News