ಯುಎಇ ಭೇಟಿಯಿಂದ ಕ್ರೈಸ್ತ-ಇಸ್ಲಾಮ್ ಸಂಬಂಧದಲ್ಲಿ ಹೊಸ ಇತಿಹಾಸ: ಪೋಪ್ ಫ್ರಾನ್ಸಿಸ್

Update: 2019-02-07 17:03 GMT

ವ್ಯಾಟಿಕನ್ ಸಿಟಿ, ಫೆ. 7: “ಇತ್ತೀಚೆಗೆ ನಾನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಕೈಗೊಂಡ ಯಾತ್ರೆಯು ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳ ನಡುವಿನ ಸಂಬಂಧದಲ್ಲಿ ಹಾಗೂ ಸಹೋದರತ್ವದ ಆಧಾರದಲ್ಲಿ ಜಾಗತಿಕ ಶಾಂತಿಯನ್ನು ಸೃಷ್ಟಿಸುವಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ” ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಬುಧವಾರ ವ್ಯಾಟಿಕನ್‌ನಲ್ಲಿ ಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಪೋಪ್ ಒಬ್ಬರು ನೀಡಿದ ಪ್ರಥಮ ಭೇಟಿಯ ವಿವರಗಳನ್ನು ನೀಡಿದರು.

ಇಸ್ಲಾಮ್‌ನ ನಾಯಕರೊಂದಿಗೆ ತಾನು ನಡೆಸಿದ ಮಾತುಕತೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಈಗ ನಡೆಯುತ್ತಿರುವುದು ಕ್ರೈಸ್ತ ಮತ್ತು ಇಸ್ಲಾಮಿಕ್ ನಾಗರಿಕತೆಗಳ ನಡುವಿನ ಸಂಘರ್ಷ ಎಂಬ ಸುಲಭ ನಿರ್ಧಾರಕ್ಕೆ ಕೆಲವರು ಬರುತ್ತಿರುವುದರ ವಿರುದ್ಧ ಎಚ್ಚರಿಕೆ ನೀಡಿದರು.

ಅಬುಧಾಬಿಯಲ್ಲಿದ್ದ ವೇಳೆ ಪೋಪ್ ಫ್ರಾನ್ಸಿಸ್, ಧಾರ್ಮಿಕ ಪ್ರೇರಿತ ಹಾಗೂ ಇತರ ಹಿಂಸಾಚಾರವನ್ನು ಖಂಡಿಸುವ ತಿಳುವಳಿಕೆ ಪತ್ರವೊಂದಕ್ಕೆ ಸುನ್ನಿ ಇಸ್ಲಾಮ್‌ನ ಪ್ರಾಚೀನ ಕಲಿಕಾ ಕೇಂದ್ರವಾಗಿರುವ ಅಲ್-ಅಝರ್‌ನ ಗ್ರಾಂಡ್ ಇಮಾಮ್ ಜೊತೆಗೆ ಸಹಿ ಹಾಕಿರುವುದನ್ನು ಸ್ಮರಿಸಬಹುದಾಗಿದೆ.

ಕೈಸ್ತ ಮತ್ತು ಇಸ್ಲಾಮ್ ಜಗತ್ತುಗಳ ನಡುವೆ ಪರಸ್ಪರ ಗೌರವ ಮತ್ತು ಸಂಧಾನ ಸಾಧ್ಯ ಎಂಬ ಸ್ಪಷ್ಟ ಹಾಗೂ ನಿರ್ಣಾಯಕ ಸಂದೇಶವನ್ನು ನೀಡಲು ಈ ಇಬ್ಬರು ಧಾರ್ಮಿಕ ನಾಯಕರು ಬಯಸಿದ್ದಾರೆ ಎಂದು ಪೋಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News