ಚತ್ತೀಸ್‌ಗಢ: ಎನ್‌ ಕೌಂಟರ್‌ಗೆ 10 ಮಾವೋವಾದಿಗಳು ಬಲಿ

Update: 2019-02-07 17:42 GMT

ರಾಯಪುರ, ಫೆ. 7: ತೆಲಂಗಾಣ-ಛತ್ತೀಸ್‌ಗಢ ಗಡಿಯಲ್ಲಿ ಗುರುವಾರ ಮುಂಜಾನೆ ನಡೆದ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ 6 ಮಹಿಳೆಯರ ಸಹಿತ 10 ಮಂದಿ ಮಾವೋವಾದಿಗಳು ಹತರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮಾವೋವಾದಿ ವಿರೋಧಿ ತಂಡ ಗ್ರೇಹೌಂಡ್‌ನ ಕಮಾಂಡೊ ಕೂಡ ಮೃತಪಟ್ಟಿದ್ದಾನೆ.

ರಾಯಪುರದ ಪೂಜಾರಿ ಕಂಕರ್ ಸಮೀಪದ ಪ್ರದೇಶದ ಗಡಿಯಲ್ಲಿ ತೆಲಂಗಾಣ, ಆಂಧ್ರಪ್ರದೇಶದ ಮಾವೋವಾದಿ ವಿರೋಧಿ ಗ್ರೇಹೌಂಡ್ಸ್ ತಂಡ ಹಾಗೂ ಒರಿಸ್ಸಾ, ಚತ್ತೀಸ್‌ಗಢ, ಮಹಾರಾಷ್ಟ್ರದ ವಿಶೇಷ ಪೊಲೀಸ್ ಸಿಬ್ಬಂದಿ ಜಂಟಿ ತಂಡ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ಗುಂಡಿನ ಚಕಮಕಿ ನಡೆಯಿತು. ಪೂಜಾರಿ ಕಂಕೇರ್‌ನಲ್ಲಿ ಇಂದು ಮುಂಜಾನೆ ಗುಂಡಿನ ಚಕಮಕಿ ಆರಂಭವಾಯಿತು. ಈ ಘಟನೆಯಲ್ಲಿ 10 ಮಂದಿ ಮಾವೋವಾದಿಗಳು ಹತರಾದರು ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯ ವಿಶೇಷ ಪ್ರಧಾನ ನಿರ್ದೇಶಕ ಡಿ.ಎಂ. ಅವಸ್ಥಿ ತಿಳಿಸಿದ್ದಾರೆ.

ಈ ಗುಂಡಿನ ಚಕಮಕಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ ಅವರು, ಗಾಯಗೊಂಡ ಸಿಬ್ಬಂದಿಯನ್ನು ಭದ್ರಾಚಲಂನಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಗತ್ಯ ಬಿದ್ದರೆ ಅವರನ್ನು ರಾಯಪುರದ ಆಸ್ಪತ್ರೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ. ಗುಂಡಿನ ಚಕಮಕಿ ನಡೆದ ಸ್ಥಳದಿಂದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕಿತ ಮಾವೋವಾದಿಗಳು ಅಡಗಿರುವ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೋಹಿತ್ ಗರ್ಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News