ವಿಜಯಾ ಬ್ಯಾಂಕ್ ಉಳಿಸಲು ಹೋರಾಟ ಸಮಿತಿಯಿಂದ ಜನಪ್ರತಿನಿಧಿಗಳ ಖಂಡನಾ ನಿರ್ಣಯ ಸಭೆ
ಮಂಗಳೂರು, ಫೆ.8: ಜಿಲ್ಲೆಯ ಹೆಮ್ಮೆಯ ಬ್ಯಾಂಕ್ ಆಗಿರುವ ವಿಜಯಾ ಬ್ಯಾಂಕ್ ವಿಲೀನ ನಿರ್ಧಾರವನ್ನು ವಿರೋಧಿಸಿ ವಿಜಯ ಬ್ಯಾಂಕ್ ಉಳಿಸಿ ಹೋರಾಟ ಸಮಿತಿ ವತಿಯಿಂದ ಉಭಯ ಜಿಲ್ಲೆಗಳ ಪಂಚಾಯತ್ ಪ್ರತಿನಿಧಿಗಳಿಂದ ಹಿಡಿದು ಲೋಕಸಭಾ ಸದಸ್ಯರವರೆಗಿನ ಜನಪ್ರತಿನಿಧಿಗಳಿಂದ ಖಂಡನಾ ನಿರ್ಣಯ ಸಭೆ ಫೆ. 20ರಂದು ಆಯೋಜಿಸಲಾಗಿದೆ.
ಸಮಿತಿಯ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೇಪಾಡಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ,ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಖಂಡನಾ ನಿರ್ಣಯ ಬೆಂಬಲಿಸಿ ಸಹಿ ಹಾಕಬೇಕು. ಈ ನಿರ್ಣಯವನ್ನು ದೆಹಲಿಯಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಸಿ, ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವನ್ನು ಹಿಂಪಡೆಯುವಂತೆ ಒತ್ತಾಯಿಸಲಾಗುವುದು ಎಂದರು.
ಹೋರಾಟ ಸಮಿತಿ ವತಿಯಿಂದ ಇತ್ತೀಚೆಗೆ ಮುಲ್ಕಿಯಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಗ್ರಾಹಕರು, ಸಾರ್ವಜನಿಕರು, ವಿವಿಧ ಪಕ್ಷಗಳ ಪ್ರತಿನಿಧಿಗಳು ಸೇರಿ 5000ಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ಉತ್ತಮ ಸ್ಪಂದನೆ ದೊರಕಿದೆ. ಫೆ. 9ರಂದು ಬೆಂಗಳೂರಿನಲ್ಲಿಯೂ ಪ್ರತಿಭಟನೆ ನಡೆಯಲಿದೆ.
ವಿಜಯಾ ಬ್ಯಾಂಕ್ ಕೃಷಿಕರು, ಸಾಮಾನ್ಯ ವರ್ಗದವರಿಗೆ ಉತ್ತಮ ಸೇವೆಯನ್ನು ನೀಡಿದೆ. ಮಾತ್ರವಲ್ಲದೆ, ಕರಾವಳಿಯಲ್ಲಿ ಸ್ಥಾಪನೆಗೊಂಡ ಈ ಬ್ಯಾಂಕ್ ಸಾಕಷ್ಟು ಕುಟುಂಬಗಳಿಗೆ ಉದ್ಯೋಗವನ್ನು ನೀಊಡಿದೆ. ಮದುವೆ, ಕೃಷಿ ಕಾರ್ಯ, ಸಣ್ಣ ಉದ್ದಿಮೆ, ಗೃಹ ಸಾಲ ಒದಗಿಸಿ ಆರ್ಥಿಕ ನೆರವು ನೀಡಿದೆ.
ಲಾಭದಲ್ಲಿರುವ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕ್‌ಗಳ ಜತೆ ವಿಲೀನಗೊಳಿಸುವ ನಿರ್ಧಾರ ಅವೈಜ್ಞಾನಿಕ. 2017-18ರ ಅವಧಿಯಲ್ಲಿ ಈ ವಿಲೀನ ಪ್ರಕ್ರಿಯೆ ಕೇಂದ್ರ ಸರಕಾರದ ಮಟ್ಟದಲ್ಲಿ ಅತ್ಯಂತ ಗುಪ್ತವಾಗಿ ನಡೆದಿದ್ದು, ಈ ಬಗ್ಗೆ ನೌಕರರ ಸಂಘಟನೆ ನ್ಯಾಯಾಲಯದ ಮೊರೆ ಕೂಡಾ ಹೋಗಿದೆ.
ಮಾತ್ರವಲ್ಲದೆ ವಿಲೀನ ವಿರೋಧಿ ದೆಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಫೆ. 13ರಂದು ವಿಚಾರಣೆಯಾಗಲಿದೆ. ಕಾನೂನು ಪ್ರಕಾರ ಬ್ಯಾಂಕ್‌ನ ಆಡಳಿತ ನಿರ್ದೇಶಕರ ಮಂಡಳಿಯ 12 ಮಂದಿ ಪ್ರತಿನಿಧಿಗಳಲ್ಲಿ ಓರ್ವ ನೌಕರರ ಪ್ರತಿನಿಧಿ ಇರಬೇಕಾಗುತ್ತದೆ. ಆದರೆ ಬ್ಯಾಂಕ್‌ನಲ್ಲಿ ಇಲ್ಲದೆ ವಿಲೀನದ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿರುವುದನ್ನು ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ ಎಂದು ದಿನೇಶ್ ಹೆಗ್ಡೆ ಉಳೇಪಾಡಿ ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ, ಹರಿಕೃಷ್ಣ ಪುನರೂರು, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.