ಇವರ ಪ್ರಾಣಕ್ಕೆ ಬೆಲೆ ಇಲ್ಲವೇ ? !

Update: 2019-02-08 12:06 GMT

ಈ ವೀಡಿಯೊದಲ್ಲಿ ಕಾಣುತ್ತಿರುವ ದೃಶ್ಯ ಕೆಲ ನಿಮಿಷಗಳ ಮೊದಲಷ್ಟೆ ವೆಲೆನ್ಸಿಯಾ ವೃತ್ತದ ಬಳಿ ಕಂಡು ಬಂದಿರುವುದು. ಈ ದೃಶ್ಯವನ್ನು ನೋಡಿದಾಗ ಇವರ ಸಾಹಸಕ್ಕೆ ಜೈ ಎನ್ನಬೇಕೋ ಅಥವಾ ನಮ್ಮ ವ್ಯವಸ್ಥೆಯನ್ನು ಹಳಿಯಬೇಕೋ ತಿಳಿಯುತ್ತಿಲ್ಲ.

ಇವರೇನೋ ಹೊಟ್ಟೆಪಾಡಿಗಾಗಿ ಪ್ರಾಣದ ಹಂಗನ್ನು ತೊರೆದು ಇಂತಹ ಅಪಾಯಕಾರಿ ಕೆಲಸಗಳಲ್ಲಿ ತೊಡಗುತ್ತಾರೆ. ಆದರೆ ಇದನ್ನು ನಿರ್ವಹಿಸುವವರಿಗೆ ಯಾಕೆ ಇವರ ಪ್ರಾಣದ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಅರ್ಥವಾಗುವುದಿಲ್ಲ.

ಕಳೆದ ಕೆಲ ದಿನಗಳಿಂದ ಇಲ್ಲಿ ಮೆಸ್ಕಾಂನಿಂದ ವಿದ್ಯುತ್ ಕಂಬಗಳಿಗೆ ಹೊಸ ತಂತಿಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ನಿಯಮಾನುಸಾರ ವಿದ್ಯುತ್ ಕಂಬಗಳಿಗೆ ಹತ್ತಿ ಕೆಲಸ ನಿರ್ವಹಿಸಬೇಕಾದರೆ ನಿರ್ದಿಷ್ಟ ತರಬೇತಿ, ಸಾಕಷ್ಟು ಸುರಕ್ಷತಾ ವ್ಯವಸ್ಥೆಯನ್ನು ಅನುಸರಿಸಬೇಕು. ಆದರೆ ಈ ದೃಶ್ಯದಲ್ಲಿ ಕಾಣುತ್ತಿರುವಂತೆ ವಿದ್ಯುತ್ ಕಂಬದಲ್ಲಿರುವ ಯುವಕನಲ್ಲಿ ಯಾವುದೇ ಸುರಕ್ಷತೆಗಳು ಕಾಣುವುದಿಲ್ಲ. ಮಾತ್ರವಲ್ಲದೆ, ಮೆಸ್ಕಾಂ ಯುನಿಫಾರಂ ಕೂಡಾ ಇಲ್ಲದಿರುವುದರಿಂದ ಇವರು ಮೆಸ್ಕಾಂ ಅಧಿಕೃತ ಸಿಬ್ಬಂದಿಯೇ ಎಂಬ ಅನುಮಾನವೂ ಇದೆ.

ಸದ್ಯ ಇಲ್ಲಿ ನಡೆಯುತ್ತಿರುವ ತಂತಿ ಅಳವಡಿಕೆ ಕಾರ್ಯದಲ್ಲಿ 10ಕ್ಕೂ ಅಧಿಕ ಮಂದಿಯಲ್ಲಿ ಒಂದಿಬ್ಬರು ಮಾತ್ರವೇ ಯುನಿಫಾರಂನಲ್ಲಿದ್ದಾರೆ. ಈ ಯುವಕನಂತೆ ಇಂದು ಇಲ್ಲಿ ಸುಮಾರು 10ರಷ್ಟು ಯುವಕರು ಈ ರೀತಿ ವಿದ್ಯುತ್ ಕಂಬಗಳಲ್ಲಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ತಂತಿಗಳನ್ನು ಅಳವಡಿಸುತ್ತಿರುವುದು ಕಂಡುಬಂತು. ಇದು ಇಲ್ಲಿಗೆ ಮಾತ್ರ ಸೀಮಿತವಾಗುವುದಿಲ್ಲ. ಬಹುತೇಕವಾಗಿ ಮೆಸ್ಕಾನಿಂದ ಈ ರೀತಿ ವಿದ್ಯುತ್ ಕಂಬಗಳಿಗೆ ತಂತಿ ಅಳವಡಿಸುವ ಸಂದರ್ಭ ಯಾವುದೇ ಯುನಿಫಾರಂ ಇಲ್ಲದ (ಅಂದರೆ ಅವರು ಕಂಬ ಹತ್ತಿ ಕಾರ್ಯ ನಿರ್ವಹಿಸುವ ಕುರಿತಂತೆ ನಿರ್ದಿಷ್ಟ ತರಬೇತಿಯನ್ನು ಪಡೆದಿರುವ ಬಗ್ಗೆ ಅನುಮಾನ), ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

ಅದೆಷ್ಟೋ ಸಂದರ್ಭಗಳಲ್ಲಿ ವಿದ್ಯುತ್ ಕಂಬಗಳನ್ನು ಹತ್ತಿ ಕಾರ್ಯ ನಿರ್ವಹಿಸುವ ವೇಳೆ ದುರ್ಘಟನೆಗೀಡಾಗಿ ಪ್ರಾಣ ಕಳೆದುಕೊಂಡಿರುವುದನ್ನು ನಾವು ನೋಡಿದ್ದೇವೆ. ಹಾಗಿದ್ದರೆ, ಮೆಸ್ಕಾಂ ಈ ರೀತಿ ಸಾಮಾನ್ಯ ವ್ಯಕ್ತಿಗಳನ್ನು ಯಾವುದೇ ಸುರಕ್ಷತೆ ಇಲ್ಲದೆ, ದುಡಿಸಿಕೊಳ್ಳುವುದನ್ನು ನೋಡಿದಾಗ ಇವರ ಪ್ರಾಣಕ್ಕೆ ಬೆಲೆ ಇಲ್ಲೇ ಎಂದು ನಾವಿಂದು ಕೇಳಬೇಕಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News