×
Ad

ಉಡುಪಿ: ನಲ್ಲೂರು ಗ್ರಾಪಂ ಪಿಡಿಒ ವಿರುದ್ಧ ಎಸ್ಪಿಗೆ ಪೋನ್‌ಇನ್‌ನಲ್ಲಿ ದೂರು

Update: 2019-02-08 17:46 IST

ಉಡುಪಿ, ಫೆ. 8: ಕಾರ್ಕಳ ತಾಲೂಕು ನಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮದ ಯಾವುದೇ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ಶುಕ್ರವಾರ ನಡೆದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಗ್ರಾಮಸ್ಥರೊಬ್ಬರು ದೂರಿದರು.

ಇಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ನಡೆಸಿಕೊಟ್ಟರು. ಕಂಪೆನಿಯೊಂದರಲ್ಲಿ ಕೆಲಸಕ್ಕಾಗಿ ತರಬೇತಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ 3800 ರೂ. ಪಾವತಿ ಸಿದ್ದು, ಆದರೆ ತರಬೇತಿ ಆರಂಭಿಸದೆ ವಂಚನೆ ಎಸಗಲಾಗಿದೆ ಎಂದು ದೂರ ಲಾಯಿತು. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೆಚ್ಚುವರಿ ಎಸ್ಪಿ ಸೂಚನೆ ನೀಡಿದರು.

ಬೈಂದೂರು ಉಪ್ಪುಂದ ಅಂಬಾಗಿಲಿನ ಶಾಲೆಬಾಗಿಲು ಬಳಿ ಅನೈತಿಕ ಚಟು ವಟಿಕೆ, ಕುಂದಾಪುರ ಆಟೋರಿಕ್ಷಾ ಚಾಲಕರಿಂದ ನಿಗದಿತ ಕನಿಷ್ಟ ಬಾಡಿಗೆ ದರಕ್ಕಿಂತ ಹೆಚ್ಚು ಹಣ ವಸೂಲಿ ಮತ್ತು ಪ್ಲ್ಯಾಗ್ ಮೀಟರ್ ಬಳಸದಿರುವುದು, ಉಡುಪಿ ಕಾಳಿಂಗ ಮರ್ದನ ರಸ್ತೆಯಲ್ಲಿ ಪಾರ್ಕಿಂಗ್ ಸಮಸ್ಯೆ, ಗಾಯತ್ರಿ ಟ್ರಾವೆಲ್ಸ್ ಬಳಿ ಇರುವ ಪೊಲೀಸ್ ಬ್ಯಾರಿಕೇಡನ್ನು ಸಾರ್ವಜನಿಕರು ತೆಗೆದಿರುವ ಬಗ್ಗೆ ದೂರಲಾಯಿತು.

ಉಡುಪಿ ನಗರ ಪಿಪಿಸಿ ಕಾಲೇಜಿನ ಬಳಿ ಒಂದೇ ಕಟ್ಟಡದಲ್ಲಿ ಗಂಡಸರ ಹಾಗೂ ಹೆಂಗಸರ ಪಿ.ಜಿ. ಕೇಂದ್ರಗಳು ಒಟ್ಟಿಗೆ ಇರುವುದರಿಂದ ಸಮೀಪ ವಾಸ್ತವ್ಯ ಇರುವವರಿಗೆ ಸಮಸ್ಯೆಯಾಗುತ್ತಿದೆ ಎಂದು ಮಹಿಳೆಯೊಬ್ಬರು ಕರೆ ಮಾಡಿ ದೂರಿದರು.

ಎಸ್ಪಿ ಕಚೇರಿಯಲ್ಲಿ ರ್ಯಾಂಪ್: ಉಡುಪಿ ಎಸ್ಪಿ ಕಚೇರಿಯಲ್ಲಿ ಅಂಗವಿಕಲರಿಗೆ ಅನುಕೂಲವಾಗುವಂತೆ ರ್ಯಾಂಪ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಬಸ್‌ಗಳಲ್ಲಿ ವಿಕಲಚೇತನರಿಗೆ ಮೀಸಲಿರಿಸಿದ ಆಸನವನ್ನು ಕಾಯ್ದಿರಿಸಬೇಕು ಎಂದು ವಿಕಲಚೇತನರ ಸಂಘದ ಪದಾಧಿಕಾರಿಯೊಬ್ಬರು ಕರೆ ಮಾಡಿ ಕೋರಿದರು. ಈಗಾಗಲೇ ಎಸ್ಪಿ ಕಚೇರಿಯಲ್ಲಿ ರ್ಯಾಂಪ್ ನಿರ್ಮಿಸುವ ಕಾರ್ಯ ಕೈಗೆತ್ತಿ ಕೊಳ್ಳಲಾಗಿದೆ ಎಂದು ಎಸ್ಪಿ ಹೇಳಿದರು.

ಬ್ರಹ್ಮಾವರ ಕೃಷ್ಣಾ ಮಿಲ್ಕ್ ಡೈರಿ, ಹ್ಯಾಂಗ್ಯೋ ಐಸ್ ಕ್ರೀಂ, ಸುಪ್ರೀಂ ಫೀಡ್ಸ್ ಕಡೆಯಿಂದ ಅಧಿಕ ಭಾರದ ಟ್ಯಾಂಕರ್‌ಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು, ಉಡುಪಿ ನಗರದ ರಿಲಾಯನ್ಸ್ ಟ್ರೆಂಡ್ ಬಳಿ ಫುಟ್‌ಪಾತ್ ಮೇಲೆ ವ್ಯಾಪಾರ, ಪಾದಾಚಾರಿಗಳಿಗೆ ನಡೆದಾಡಲು ಸಮಸ್ಯೆ, ಕೊಲ್ಲೂರು ಕೆರಾಡಿ ಪರಿಸರದ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಬ್ರಹ್ಮಾವರ ಅಕ್ರಮ ಕಲ್ಲು ಗಣಿಗಾರಿಕೆ, ಮಣಿಪಾಲ ಎಂಐಟಿ ಸಮೀಪದ ಗೂಡಂಗಡಿಗಳಲ್ಲಿ ಬೀಡಿ, ಸಿಗರೇಟು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದವು.

ಉಡುಪಿಯಿಂದ ಶಿರ್ವ, ಮಂಚಕಲ್, ಮುಂಡ್ಕೂರು ಕಡೆಗೆ ಹೋಗುವ ಬಸ್‌ಗಳು ಉದ್ಯಾವರ ಒಳರಸ್ತೆಯಲ್ಲಿ ಹೋಗದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿ ಸುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ, ಕಲ್ಸಂಕ ಹಾಗೂ ಕರಾವಳಿ ಜಂಕ್ಷನ್ ಬಳಿ ಸಿಗ್ನಲ್ಲೈಟ್ಗಳು ಅಳವಡಿಕೆ, ಉಪ್ಪುಂದ ಗಂಟಿಹೊಳೆ ಬಳಿ ವಿದ್ಯಾರ್ಥಿಗಳಿಂದ ಕಾನೂನು ಬಾಹಿರವಾಗಿ ಬೈಕ್ ಸವಾರಿ, ಮಣಿಪಾಲ ಕ್ರೈಸ್ಟ್ ಶಾಲೆಯ ಬಳಿ ಬಹಳ ಸಮಯದಿಂದ ನಿಂತಿರುವ ಬಸ್‌ನಿಂದ ಸಂಚಾರಕ್ಕೆ ತೊಡಕು, ಬ್ರಹ್ಮಾವರ ಆಕಾಶವಾಣಿ ಬಳಿಯ ಗ್ಯಾರೇಜೊಂದರ ಎದುರು ಹಲವು ವರ್ಷಗಳಿಂದ ನಿಂತಿರುವ ಕಾರನ್ನು ತೆರವು ಗೊಳಿಸುವಂತೆ ಒತ್ತಾಯಿಸಿ ಸಾರ್ವಜನಿಕರಿಂದ ಫೋನ್‌ಕರೆಗಳು ಬಂದವು.

ಕಾರ್ಯಕ್ರಮದಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್, ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ್ ಮೊದಲಾದವರು ಹಾಜರಿದ್ದರು.

ಒಂದು ರಿಕ್ಷಾದಲ್ಲಿ 21 ಶಾಲಾ ಮಕ್ಕಳು !

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಆಟೋ ರಿಕ್ಷಾದಲ್ಲಿ ಸುಮಾರು 21 ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ಚಾಲಕನ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಸಾರ್ವಜನಿಕರು ಕರೆ ಮಾಡಿ ಮನವಿ ಮಾಡಿದರು.

ಆದಿವುಡುಪಿ ಸಂತೆ ಮಾರ್ಕೆಟ್ ಒಳಗೆ ವ್ಯಾಪಾರ ಮಾಡುವ ಬದಲು ಹೊರ ಗಡೆ ರಸ್ತೆ ಬದಿ ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಸಂಚಾರಕ್ಕೆ ತೊಂದರೆ ಯಾಗುತ್ತಿದೆ ಎಂಬ ದೂರಿಗೆ ಸ್ಪಂದಿಸಿದ ಎಸ್ಪಿ, ಈ ಬಗ್ಗೆ ನಗರಸಭೆಗೆ ಪತ್ರ ಬರೆದು, ಸ್ಥಳ ಪರಿಶೀಲನೆ ಮಾಡಲಾಗುವುದು. ಮುಂದೆ ಸಂತೆ ನಡೆಯುವ ಸಮಯ ಹೊಯ್ಸಳವನ್ನು ಕಳುಹಿಸಿ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಲಾಗುವುದು ಎಂದರು.

ಮೂರು ವಾರಗಳ ಪ್ರಕರಣಗಳು

ಜ.18ರಿಂದ ಈವರೆಗೆ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 6 ಮಟ್ಕಾ ಪ್ರಕರಣಗಳಲ್ಲಿ 6 ಬಂಧನ, ಐದು ಜೂಜಾಟ ಪ್ರಕರಣದಲ್ಲಿ 30 ಬಂಧನ, ಐದು ಗಾಂಜಾ ಸೇವನೆ ಪ್ರಕರಣದಲ್ಲಿ ಆರು ಮಂದಿ ಬಂಧಿಸಲಾಗಿದೆ. ಅದೇ ರೀತಿ 92 ಕೋಟ್ಪಾ, 22 ಕುಡಿದು ಚಾಲನೆ, 106 ಕರ್ಕಶ ಹಾರ್ನ್, 57 ಮೊಬೈಲ್ ಬಳಸಿ ಚಾಲನೆ, 1971 ಹೆಲ್ಮೆಟ್ ಧರಿಸದೆ ವಾಹನ ಚಾಲನೆ, 150 ಅತಿವೇಗ, 3126 ಇತರ ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News