×
Ad

ಪ್ರವಾದಿ ನಿಂದನೆಯ ವಿರುದ್ಧ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಖಂಡನಾ ಸಮಾವೇಶ

Update: 2019-02-08 18:04 IST

ಮಂಗಳೂರು, ಫೆ.8: ಪ್ರವಾದಿ ಮುಹಮ್ಮದ್ (ಸ) ಅವರನ್ನು ಅವಹೇಳಿಸಿದ ಖಾಸಗಿ ಟಿವಿಯ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ಖಂಡನಾ ಸಭೆ ಜರುಗಿತು.

ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಈ ಹಿಂದೆ ಬಂಟ್ವಾಳದ ಮನೆಯೊಂದಕ್ಕೆ ನುಗ್ಗಿದ ಪೊಲೀಸರು ಕುರ್‌ಆನ್‌ಗೆ ಅಗೌರವ ತೋರಿದ್ದರು. ಆವಾಗ ಮುಸ್ಲಿಂ ಸಮುದಾಯ ಮೌನ ವಹಿಸಿದ್ದೇ ಇಂದು ಅಜಿತ್ ಹನುಮನಕ್ಕನವರ್‌ನಂತಹವರು ಪ್ರವಾದಿ (ಸ)ಯ ವಿರುದ್ಧ ಮಾತನಾಡಲು ಕಾರಣವಾಗಿದೆ. ಅಂದು ಪೊಲೀಸರ ವರ್ತನೆಯ ಬಗ್ಗೆ ಸುದ್ದಿ ಮಾಡಿದ್ದ ‘ವಾರ್ತಾಭಾರತಿ’ ಪತ್ರಿಕೆ ಮತ್ತದರ ವರದಿಗಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರಲ್ಲದೆ, ವರದಿಗಾರನನ್ನು ಜೈಲಿಗೆ ಕಳುಹಿಸಿದ್ದರು. ಅವಾಗ ಕಾನೂನು ಕ್ರಮಕೈಗೊಂಡಿದ್ದ ಪೊಲೀಸರು ಇಂದು ಅಜಿತ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣ ಏನು ? ಎಂದು ಪ್ರಶ್ನಿಸಿದರಲ್ಲದೆ, ರಾಜ್ಯ ಸರಕಾರದ ಈ ತಾರತಮ್ಯ ಧೋರಣೆಯ ವಿರುದ್ಧ ಮೌನ ವಹಿಸಬಾರದು. ಅನ್ಯಾಯ, ಅಕ್ರಮ, ಅನೀತಿಯ ವಿರುದ್ಧ ಧ್ವನಿ ಎತ್ತಲೇಬೇಕು ಎಂದು ಕರೆ ನೀಡಿದರು.

ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬ್ ಎಸ್.ಬಿ. ದಾರಿಮಿ ಮಾತನಾಡಿ ಅಲ್ಲಲ್ಲಿ ನಡೆಯುವ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿ ಯಾವತ್ತೂ ಕೂಡ ಮುಸ್ಲಿಮರು ಹಿಂದೂಗಳನ್ನು ಯಾವತ್ತೂ ಎದುರು ಹಾಕಿಕೊಳ್ಳಬಾರದು. ಯಾಕೆಂದರೆ ಶೇ.99ರಷ್ಟು ಹಿಂದೂಗಳು ಒಳ್ಳೆಯವರಾಗಿದ್ದಾರೆ. ಹಾಗಾಗಿ ಹಿಂದೂ ಧರ್ಮಕ್ಕೆ ಕಳಂಕವಾಗಿ ಮಾರ್ಪಟ್ಟಿರುವ ಹಿಂದುತ್ವವಾದಿಗಳ ವಿರುದ್ಧ ಮುಸ್ಲಿಮರು ಪ್ರತಿಭಟಿಸಬೇಕು. ಪ್ರವಾದಿ ಮುಹಮ್ಮದ್ (ಸ)ಅವರನ್ನು ಅವಹೇಳಿಸಿದ ಸುವರ್ಣ ನ್ಯೂಸ್ ಚಾನೆಲ್ನ ಕಚೇರಿ ಮುಂದೆ ಪ್ರತಿಭಟಿಸಿ ಪ್ರವಾದಿ ಪ್ರೇಮ ಮೆರೆಯೋಣ ಎಂದರು.

ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಸೈಯದ್ ಯಹ್ಯಾ ತಂಙಳ್, ಮಂಗಳೂರಿನ ಇಕ್ರಾ ಅರಬಿಕ್ ಸ್ಕೂಲ್‌ನ ಪ್ರಾಂಶುಪಾಲ ಮುಹಮ್ಮದ್ ಸಾಲಿಮ್ ನದ್ವಿ, ಉಳ್ಳಾಲ ಅಳೇಕಲದ ಅಲ್ ಇಸ್ಲಾಹಿ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಅಲಿ ಸಲಫಿ, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಅಡ್ವಕೇಟ್ ಮುಝಫರ್ ಅಹ್ಮದ್ ಮುಖ್ಯ ಭಾಷಣಗೈದರು.

ವೇದಿಕೆಯಲ್ಲಿ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಬೊಳಂತೂರು, ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ವಿವಿಧ ಸಂಘಟನೆ ಹಾಗೂ ಪಕ್ಷಗಳ ಮುಖಂಡರಾದ ಕರ್ನಿರೆ ಸೈಯದ್ ಹಾಜಿ, ಟಿ.ಎಸ್.ಅಬ್ದುಲ್ಲಾ ಸಾಮಣಿಗೆ, ನೌಶಾದ್ ಹಾಜಿ ಸೂರಲ್ಪಾಡಿ, ಫಾರೂಕ್ ಉಳ್ಳಾಲ್, ಮುಸ್ತಫಾ ಕೆಂಪಿ, ಅಮೀರ್ ತುಂಬೆ, ನೂರುದ್ದೀನ್ ಸಾಲ್ಮರ, ಪಿ.ಎ.ರಹೀಂ, ಎನ್.ಎಸ್. ಕರೀಂ, ಖಾಲಿದ್ ಉಜಿರೆ, ಮೊಯ್ದಿನ್ ಮೋನು, ಇಕ್ಬಾಲ್ ಮುಲ್ಕಿ, ಝಾಕಿರ್ ಹುಸೈನ್ ಅಳೇಕಲ, ಬಾಷಾ ತಂಙಳ್, ಮುಹಮ್ಮದ್ ಹನೀಫ್ ಕಾಟಿಪಳ್ಳ, ಅಥಾವುಲ್ಲಾ ಜೋಕಟ್ಟೆ, ಜಾಫರ್ ಫೈಝಿ, ಹನೀಫ್ ಹಾಜಿ ಬಂದರ್, ಟಿ.ಎಂ. ಶಹೀದ್, ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಕಾರ್ಪೊರೇಟರ್ ಅಯಾಝ್, ಸುಳ್ಯ ಪಟ್ಟಣ ಪಂಚಾಯತ್ ಸದಸ್ಯ ಮುಸ್ತಫಾ ಸುಳ್ಯ, ಮುಸ್ತಫಾ ಸಿ.ಎಂ., ಮುಹಮ್ಮದ್ ಅಶ್ರಫ್ ಬದ್ರಿಯಾ, ಮುಹಮ್ಮದ್ ಹನೀಫ್ ಯು., ಹಿದಾಯತ್ ಮಾರಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

ಜಮಾಅತೆ ಇಸ್ಲಾಮೀ ಹಿಂದ್‌ನ ಮಂಗಳೂರು ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ ಸ್ವಾಗತಿಸಿದರು. ಬ್ಯಾರಿ ಅಕಾಡಮಿಯ ಮಾಜಿ ಸದಸ್ಯ ಶರೀಫ್ ನಿರ್ಮುಂಜೆ ಸ್ತುತಿಗೀತೆ ಹಾಡಿದರು. ವಿದ್ಯಾರ್ಥಿ ಮುಹಮ್ಮದ್ ಇಸ್ಮಾಯೀಲ್ ಕಿರಾಅತ್ ಪಠಿಸಿದರು. ಫುಝೈಲ್ ಇಬ್ರಾಹೀಂ ಕಿರಾಅತ್ ಅನುವಾದಿಸಿದರು. ಗಡಿನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ ವಂದಿಸಿದರು. ಬ್ಯಾರಿ ಅಕಾಡಮಿಯ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News