ಕೋಟ ಜೋಡಿ ಕೊಲೆ ಪ್ರಕರಣ: ಜಿ.ಪಂ. ಸದಸ್ಯ ಸಹಿತ 6 ಮಂದಿ ಪೊಲೀಸ್ ಕಸ್ಟಡಿಗೆ
ಉಡುಪಿ, ಫೆ.8: ಶೌಚಾಲಯ ಹೊಂಡದ ವಿಚಾರದಲ್ಲಿ ಜ. 26ರಂದು ನಡೆದ ಮಣೂರು ಗ್ರಾಮದ ಚಿಕ್ಕನಕೆರೆ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಉಡುಪಿ ಜಿಲ್ಲಾ ಪಂಚಾಯತ್ ಕೋಟ ಕ್ಷೇತ್ರ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್ (38) ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಇಂದು ಅಪರಾಹ್ನ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಕೊಳ್ಳಲಾಗಿದೆ.
ಪ್ರಕರಣದ ತನಿಖಾಧಿಕಾರಿಯಾಗಿರುವ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಆರೋಪಿಗಳಾದ ರಾಜಶೇಖರ್ ರೆಡ್ಡಿ (44), ತಲ್ಲೂರಿನ ಜಿ.ರವಿ ಯಾನೆ ಮೆಡಿಕಲ್ ರವಿ (42), ಹರೀಶ್ ರೆಡ್ಡಿ (40), ಉಡುಪಿ ಕೊಡವೂರು ಶಂಕರನಾರಾಯಣ ದೇವಸ್ಥಾನ ಬಳಿಯ ಮಹೇಶ್ ಗಾಣಿಗ (38), ಕೊಡವೂರು ಲಕ್ಷ್ಮೀನಗರದ ರವಿ ಯಾನೆ ರವಿಚಂದ್ರ ಪೂಜಾರಿ (28) ಎಂಬವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕುಂದಾಪುರದ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಪೊಲೀಸರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಶ್ರೀಕಾಂತ್ ಆರೋಪಿಗಳನ್ನು ಫೆ.15ರವರೆಗೆ ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು. ಬಳಿಕ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ಬಿಗಿ ಭದ್ರತೆಯಲ್ಲಿ ಕರೆದೊಯ್ದಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಆರು ಮಂದಿ ಪೈಕಿ ಇಬ್ಬರು ಆರೋಪಿಗಳ ಮುಖವನ್ನು ಮುಚ್ಚಲಾಗಿತ್ತು.
ಉಳಿದ ಆರೋಪಿಗಳಿಗೆ ಶೋಧ
ಪ್ರಕರಣಕ್ಕೆ ಸಂಬಂಧಿಸಿ ಫೆ. 7ರಂದು ಪ್ರಮುಖ ಆರೋಪಿ ಮಣೂರು ಗ್ರಾಮದ ರಾಜಶೇಖರ ರೆಡ್ಡಿ (44) ಹಾಗೂ ತಲ್ಲೂರಿನ ಜಿ.ರವಿ ಯಾನೆ ಮೆಡಿಕಲ್ ರವಿ(42) ಎಂಬವರನ್ನು ಪೊಲೀಸರು ಮಡಿಕೇರಿಯಲ್ಲಿ ಬಂಧಿಸಿದ್ದರು.
ಬಂಧಿತ ರಾಜಶೇಖರ್ ರೆಡ್ಡಿ ನೀಡಿದ ಮಾಹಿತಿಯಂತೆ ಪೊಲೀಸರು ಹೊಸನಗರದಲ್ಲಿ ಫೆ.8ರಂದು ಬೆಳಗಿನ ಜಾವ ರಾಜಶೇಖರ್ ರೆಡ್ಡಿಯ ಸಹೋದರ ಹರೀಶ್ ರೆಡ್ಡಿ(40), ಉಡುಪಿ ಕೊಡವೂರು ಶಂಕರನಾರಾಯಣ ದೇವಸ್ಥಾನ ಬಳಿಯ ಮಹೇಶ್ ಗಾಣಿಗ (38), ಕೊಡವೂರು ಲಕ್ಷ್ಮೀನಗರದ ರವಿ ಯಾನೆ ರವಿಚಂದ್ರ ಪೂಜಾರಿ (28) ಎಂಬವರನ್ನು ಬಂಧಿಸಲಾಗಿದೆ.
ಕೊಲೆಗೆ ಮುನ್ನ ಜ.23ರಂದು ಹಾಗೂ ಕೊಲೈಗೆದ ಜ.26ರಂದು ರಾತ್ರಿ ವೇಳೆ ಆರೋಪಿಗಳೊಂದಿಗೆ ಸಂರ್ಪಕ ಹೊಂದಿದ್ದ ಆರೋಪದಲ್ಲಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್‌ನನ್ನು ಪೊಲೀಸರು ಫೆ.7ರಂದು ಕೋಟದಲ್ಲಿ ವಶಕ್ಕೆ ತೆಗೆದುಕೊಂಡಿದ್ದರು. ತೀವ್ರ ವಿಚಾರಣೆಯಿಂದ ರಾಘವೇಂದ್ರ ಕಾಂಚನ್ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿತ್ತು. ಅದರಂತೆ ಆತನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.
ಉಡುಪಿ ಡಿವೈಎಸ್ಪಿ ಜೈಶಂಕರ್ ಪ್ರಕರಣದ ತನಿಖಾಧಿಕಾರಿಯಾಗಿದ್ದು, ಇವರ ನೇತೃತ್ವದಲ್ಲಿ ರಚಿಸಲಾದ ಉಡುಪಿ ಡಿಸಿಐಬಿ ನಿರೀಕ್ಷಕ ಕಿರಣ್, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಸಂಪತ್ ಕುಮಾರ್, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ತಂಡಗಳು ತನಿಖೆಯನ್ನು ಮುಂದುವರೆಸಿದೆ.
ಈ ಪ್ರಕರಣದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದಾರೆಂಬ ಆರೋಪವನ್ನು ಅಲ್ಲಗಳೆದ ಎಸ್ಪಿ, ತನಿಖೆಯಲ್ಲಿ ಈವರೆಗೆ ಪೊಲೀಸ್ ಭಾಗಿಯಾಗಿರುವುದು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಆರೋಪಿಗಳು ಚಿಕ್ಕನಕೆರೆ ಲೋಹಿತ್ ಪೂಜಾರಿ ಎಂಬವರ ಮನೆಯ ಶೌಚಾಲಯ ಹೊಂಡ ವಿಚಾರಕ್ಕೆ ಸಂಬಂಧಿಸಿ ಜ.26ರಂದು ರಾತ್ರಿ 11 ಗಂಟೆ ಸುಮಾರಿಗೆ ನಡೆದ ಗಲಾಟೆಯ ಸಂದರ್ಭ ಲೋಹಿತ್ ಪೂಜಾರಿ ಸ್ನೇಹಿತರಾದ ಭರತ್ (30) ಹಾಗೂ ಯತೀಶ್ ಕಾಂಚನ್ (25) ಎಂಬವರನ್ನು ತಲವಾರಿ ನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿ ಶೀಟರ್ ರೆಡ್ಡಿ ಸಹೋದರರು
ಸುಮಾರು 40-50ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಪಾವಗಡ ಮೂಲದ ರಾಜಶೇಖರ್ ರೆಡ್ಡಿ ತಂದೆ ಮೀನು ವ್ಯಾಪಾರಕ್ಕಾಗಿ ಕುಂದಾಪುರಕ್ಕೆ ಆಗಮಿಸಿದ್ದು, ನಂತರ ಅವರ ಇಲ್ಲೇ ಮದುವೆಯಾಗಿ ಮಣೂರಿನಲ್ಲಿ ನೆಲೆ ನಿಂತಿದ್ದರು. ಮುಂದೆ ಅವರ ಮಕ್ಕಳಾದ ರಾಜಶೇಖರ್ ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಹರೀಶ್ ರೆಡ್ಡಿ ಕೂಡ ಇಲ್ಲೇ ಮನೆ ಕಟ್ಟಿ ವಾಸವಾಗಿದ್ದರು.
ಭೂ ವ್ಯವಹಾರ, ಬಡ್ಡಿ ವ್ಯವಹಾರಗಳನ್ನು ನಡೆಸುತ್ತಿದ್ದ ರಾಜಶೇಖರ್ ರೆಡ್ಡಿ ಹಾಗೂ ಹರೀಶ್ ರೆಡ್ಡಿ ರೌಡಿ ಶೀಟರ್‌ಗಳಾಗಿದ್ದಾರೆ. ಹರೀಶ್ ರೆಡ್ಡಿ ವಿರುದ್ಧ 2001ರಿಂದ ಈವರೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳು ಪ್ರಕರಣ ಗಳು ದಾಖಲಾಗಿವೆ. ಇದರಲ್ಲಿ 2005ರಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಶ್ರೀನಿವಾಸ ಬೈಲೆರೆ ಕೊಲೆ ಪ್ರಕರಣ ಕೂಡ ಒಂದು.
1993ರಿಂದ 2000 ವರೆಗೆ ರಾಜಶೇಖರ್ ರೆಡ್ಡಿ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 9 ಪ್ರಕರಣಗಳು ದಾಖಲಾಗಿದ್ದವು. ರೆಡ್ಡಿ ಸಹೋದರರಲ್ಲಿ ಚಂದ್ರಶೇಖರ್ ರೆಡ್ಡಿ ಇನ್ನಷ್ಟೆ ಬಂಧನವಾಗಬೇಕಾಗಿದೆ. ಆರೋಪಿ ಮಹೇಶ್ ಗಾಣಿಗ ವಿರುದ್ಧ 2017ರಲ್ಲಿ ಮಣಿಪಾಲದಲ್ಲಿ ಒಂದು ಪ್ರಕರಣ ದಾಖಲಾಗಿತ್ತು.
ಪ್ರತಿಭಟನೆಯಲ್ಲೂ ಇದ್ದ, ಶವಗಾರಕ್ಕೂ ಬಂದಿದ್ದ !
ಕೋಟ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ರಾಘವೇಂದ್ರ ಕಾಂಚನ್, ಹಲವು ವರ್ಷಗಳ ಹಿಂದೆ ಕೋಟದಲ್ಲಿ ನಡೆದ ಕೊಲೆಯತ್ನ ಪ್ರಕರಣ ದಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದು ಬಂದಿದ್ದನು.
ಕೊಲೆ ನಡೆದ ಮರುದಿನ ಜ.27ರಂದು ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಮಣಿಪಾಲ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು. ಅಲ್ಲಿಗೆ ಬಂದಿದ್ದ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಮೃತದೇಹಗಳ ವೀಕ್ಷಣೆ ಬಳಿಕ ಮೃತರ ಕುಟುಂಬ ಹಾಗೂ ಸ್ನೇಹಿತರಿಗೆ ಸಾಂತ್ವನ ಹೇಳಿದ್ದನು.
ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕೋಟ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಫೆ. 3ರಂದು ಕೋಟದಲ್ಲಿ ನಡೆದ ಧರಣಿ ಯಲ್ಲೂ ರಾಘವೇಂದ್ರ ಕಾಂಚನ್ ಪಾಲ್ಗೊಂಡಿದ್ದನು. ಇದೀಗ ಈತ ಈ ಕೊಲೆ ಪ್ರಕರಣದ ಸೂತ್ರಧಾರ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಮೊದಲು ಉಡುಪಿ ತಾಪಂ ಬಿಜೆಪಿ ಸದಸ್ಯನಾಗಿದ್ದ ರಾಘವೇಂದ್ರ ಕಾಂಚನ್, 2016ರಲ್ಲಿ ನಡೆದ ಉಡುಪಿ ಜಿಪಂ ಚುನಾವಣೆ ಯಲ್ಲಿ ಬಿಜೆಪಿ ಯಿಂದ ಕೋಟ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಜಯ ಸಾಧಿಸಿದ್ದನು.