ಉಡುಪಿ: ರಾಜ್ಯ ಬಜೆಟ್‌ಗೆ ಸ್ಥಳೀಯ ನಾಯಕರ ಪ್ರತಿಕ್ರಿಯೆಗಳು
ನಾಡಿನ ಸರ್ವರ ಹಿತಕಾಯುವ ಬಜೆಟ್
ಉಡುಪಿ, ಫೆ. 8: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಮಂಡಿಸಿದ ನಮ್ಮ ಸರಕಾರದ ಬಜೆಟ್ ನಾಡಿನ ಎಲ್ಲಾ ಕ್ಷೇತ್ರಗಳ, ಎಲ್ಲಾ ಜನಾಂಗಗಳ ಸಮಗ್ರ ಹಿತ ಕಾಯ್ದುಕೊಳ್ಳಲು ಮತ್ತು ರಾಜ್ಯದ ಅಭಿವೃದ್ಧಿಯ ಗತಿಯನ್ನು ಮತ್ತಷ್ಟು ಹೆಚ್ಚಿಸಲು ಪೂರಕವಾಗಿದೆ.
-ಡಾ.ಜಯಮಾಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ.
ಬೋಗಸ್ ಬಜೆಟ್
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಕರಾವಳಿ ಜಿಲ್ಲೆಗಳಿಗೆ ತುಂಬಾ ನಿರಾಶಾದಾಯಕ ಬಜೆಟ್. ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ 50 ಕೋಟಿ ರೂ. ಅನುದಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮನವಿ ನೀಡಲಾಗಿತ್ತು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಅನುದಾನ ನೀಡದೇ ಇರುವುದು ಬಹಳ ಬೇಸರ ತಂದಿದೆ. ಬಜೆಟ್‌ಗೆ ಉತ್ತರದ ಸಂದರ್ಭದಲ್ಲಾದರೂ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅನುದಾನ ನೀಡಬೇಕು ಎಂದು ಆಗ್ರಹಿಸುತ್ತೇವೆ. ಮಲ್ಪೆಯ ಮೀನುಗಾರಿಕಾ ಜಟ್ಟಿಗೆ 15 ಕೋಟಿ ಮತ್ತು ಕೆರೆಗಳ ಅಭಿವೃದ್ಧಿಗೆ 40 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ.
-ಕೆ ರಘುಪತಿ ಭಟ್, ಉಡುಪಿ ಶಾಸಕರು.
ಜನಪರ ಹಾಗೂ ಅಭಿವೃದ್ದಿ ಪರ ಬಜೆಟ್
ಜನಪರ ಹಾಗೂ ಅಭಿವೃದ್ದಿ ಪರ ಬಜೆಟ್ ಕೃಷಿ, ಕೃಷಿ ವಲಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಮತ್ತು ಆರೋಗ್ಯ ವಲಯಕ್ಕೆ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಅದೇ ರೀತಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ತುಳು, ಕೊಡವ, ಕೊಂಕಣಿ ಭಾಷೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಪ್ರಸ್ತಾವನೆ ಒಳ್ಳೆಯ ಬೆಳವಣಿಗೆ. ಒಟ್ಟಿನಲ್ಲಿ ಇದೊಂದು ಜನಪರವಾದ ಮತ್ತು ಅಭಿವೃದ್ದಿ ಪರವಾದ ಉತ್ತಮ ಬಜೆಟ್.
-ಜನಾರ್ದನ ತೋನ್ಸೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ.
ಗ್ರಾಮೀಣ ಅಭಿವೃದ್ಧಿ ಚಿಂತನೆಯುಳ್ಳ ರೈತ ಬಜೆಟ್
ಕೃಷಿ, ಆರೋಗ್ಯ, ಕ್ರೀಡೆ, ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಅಭಿವೃದ್ದಿ ಗೆ ಯೋಜನೆ ರೂಪಿಸಲಾಗಿದೆ. 4 ಹೊಸ ತಾಲೂಕುಗಳ ಘೋಷಣೆಯೊಂದಿಗೆ ಹಾಲಿ ಯೋಜನೆಗಳಿಗೆ ಅನುದಾನ ಹೆಚ್ಚಳಗೊಳಿಸಿ ಬಲ ತುಂಬಲು ಪ್ರಯತ್ನಿಸ ಲಾಗಿದೆ. ಕೃಷಿ ಉತ್ಪನ್ನ ಸಂಗ್ರಹ ಉಗ್ರಾಣ, ಸಿರಿಧಾನ್ಯ ಬೆಳೆಗಾರರಿಗೆ ಹಾಗೂ ಹಾಲು ಉತ್ಪಾದಕರಿಗೆ ಬೆಂಬಲ ಬೆಲೆ, ನಗರ ಪ್ರದೇಶದ ಜನತೆ ಎದುರಿಸು ತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಪಾರ್ಕಿಂಗ್ ನಿಯಮ ಹಾಗೂ ಅನುಷ್ಠಾನ ಯೋಜನಾ ನೀತಿ ಜಾರಿ ಶ್ಲಾಘನೀಯ. ಕರಾವಳಿ ಅಭಿವೃದ್ದಿ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ರಾಜ್ಯದ ಅಭಿವೃದ್ದಿಗೆ ಪೂರಕ ವಾತಾವಣ ಕಲ್ಪಿಸಿದೆ.
-ಭಾಸ್ಕರರಾವ್ ಕಿದಿಯೂರು, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ.
ನೈಜ ಕಾಳಜಿಯ ಬಜೆಟ್
ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಮಂಡಿಸಿದ ರಾಜ್ಯ ಬಜೆಟ್ ರೈತರ, ಮಧ್ಯಮ ವರ್ಗದವರ, ಬಡವರ, ಹೀಗೆ ಎಲ್ಲಾ ವರ್ಗದವರ ಹಾಗೂ ವಿಶೇಷ ವಾಗಿ ಜನಸಾಮಾನ್ಯರ ಬಗ್ಗೆ ನೈಜ ಕಾಳಜಿಯುಳ್ಳ ಐತಿಹಾಸಿಕ ಬಜೆಟ್.
ಕರಾವಳಿ ಹಾಗೂ ಮಲೆನಾಡಿಗೆ ಮುಖ್ಯಮಂತ್ರಿಗಳು ಈ ಬಜೆಟ್‌ನಲ್ಲಿ ಅಭೂತ ಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಮಲ್ಪೆಯಲ್ಲಿ ಜಟ್ಟಿ ಹಾಗೂ ತ್ಯಾಜ್ಯ ನಿರ್ವಹಣಾ ಘಟಕಕ್ಕೆ 15 ಕೋಟಿ, ಕಾರ್ಕಳದಲ್ಲಿ 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಎಣ್ಣೆಹೊಳೆ ಯೋಜನೆ, ಭತ್ತ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 7500 ರೂಪಾಯಿ, ಆಶಾ ಕಾರ್ಯಕತೆರ್ಯರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, ಬಾಣಂತಿ ಯರಿಗೆ ಮಾಶಾಸನ, ಹಿರಿಯ ನಾಗರಿಕರ ಮಾಶಾಸನ ಹೆಚ್ಚಳ, ಉದ್ಯೋಗ ಸೃಷ್ಟಿಗೆ ಉತ್ತೇಜನ, ಅರೋಗ್ಯ ಸೇವೆಗೆ ಒತ್ತು, ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಳ ಮುಂತಾದ ಹಲವು ಯೋಜನೆಗಳನ್ನು ಈ ಬಜೆಟ್‌ನಲ್ಲಿ ನೀಡಿದ್ದಾರೆ.
-ಯೋಗೀಶ್ ವಿ.ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಉಡುಪಿ.
ಅತ್ಯುತ್ತಮ ಬಜೆಟ್
ಕುಮಾರಸ್ವಾಮಿ ಅವರು ಮಂಡಿಸಿದ ಈ ವರ್ಷದ ಬಜೆಟ್ ಎಲ್ಲಾ ವರ್ಗದ ಜನರ ಸರ್ವತೋಮುಖ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವ ಅತ್ಯುತ್ತಮ ಬಜೆಟ್. ಕಾರ್ಮಿಕರು, ರೈತರು, ಮಹಿಳೆಯರು, ಮೀನುಗಾರರು ಹೀಗೆ ವರ್ಗಗಳ ಹಿತವನ್ನು ಮುಖ್ಯಮಂತ್ರಿಗಳು ಕಾಪಾಡಿದ್ದಾರೆ.
-ಜಯಕುಮಾರ್ ಪರ್ಕಳ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ.