ಮಂಗನ ಕಾಯಿಲೆ ಬಗ್ಗೆ ಭಯಬೇಡ, ಎಚ್ಚರವಿರಲಿ: ಮದನ್‌ಗೋಪಾಲ್
ಉಡುಪಿ, ಫೆ.8: ಮಂಗನ ಕಾಯಿಲೆ ಕುರಿತಂತೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಆದರೆ ಕಾಯಿಲೆ ಹರಡುವ ವಿಧಾನದ ಬಗ್ಗೆ ಅರಿತು ಎಚ್ಚರಿಕೆಯಿಂದಿರಬೇಕು ಎಂದು ಮಂಗನ ಕಾಯಿಲೆ ಕುರಿತ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಮದನ್‌ಗೋಪಾಲ್ ತಿಳಿಸಿದ್ದಾರೆ.
ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಬಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣ ಕುರಿತು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮಂಗನ ಕಾಯಿಲೆ ಕುರಿತಂತೆ ಅರಣ್ಯದಂಚಿನ ಗ್ರಾಮಸ್ಥರಿಗೆ ಅರಿವು ಮೂಡಿಸಿ ಹಾಗೂ ಅವರಿಗೆ ಅಗತ್ಯವಿರುವ ಡಿಎಂಪಿ ತೈಲವನ್ನು ವಿತರಿಸಿ. ಮಂಗನ ಕಾಯಿಲೆ ಕುರಿತಂತೆ ಜನರಲ್ಲಿರುವ ಭಯ ಹೋಗಲಾಡಿಸಿ, ಅವರಲ್ಲಿ ದೈರ್ಯ ತುಂಬಿ. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಯೋಜನೆ ರೂಪಿಸಿ ಅದರಂತೆ ಕಾರ್ಯ ನಿರ್ವಹಿಸಿ. ಹೆಚ್ಚು ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿ. ಅರಣ್ಯ, ಪಶುಪಾಲನೆ ಸೇರಿದಂತೆ ಎಲ್ಲಾ ಇಲಾಖೆಗಳೊಂದಿಗೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಮತ್ತು ಜಿಲ್ಲಾಮಟ್ಟದ ಅಧಿಕಾರಿಯೊಬ್ಬರನ್ನು ಎಲ್ಲಾ ತಾಲೂಕುಗಳಿಗೆ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಿ ಎಂದು ಮದನ್‌ಗೋಪಾಲ್ ಸೂಚಿಸಿದರು.
ಮಂಗನ ಕಾಯಿಲೆ ಕುರಿತು ಸತ್ಯಶೋಧನಾ ಸಮಿತಿಯು ಫೆ.24ರಂದು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದು ಮದನ್‌ಗೋಪಾಲ್ ತಿಳಿಸಿದರು.
ಜಿಲ್ಲೆಯ ಜನರಲ್ಲಿ ಇದುವರೆವಿಗೂ ಮಂಗನಕಾಯಿಲೆ ಪತ್ತೆಯಾಗಿಲ್ಲ, ಇದುವರೆಗೆ 129 ಮಂಗಗಳ ಸಾವು ಸಂಭವಿಸಿದ್ದು, 48 ಮಂಗಗಳ ಅಟಾಪ್ಸಿ ನಡೆಸಲಾಗಿದೆ. ಮಂಗನ ಸಾವು ಸಂಭವಿಸಿದ 5 ಕಿಮೀ ವ್ಯಾಪ್ತಿಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅರಣ್ಯದಂಚಿನ ಗ್ರಾಮಸ್ಥರಿಗೆ ಡಿಎಂಪಿ ತೈಲ ವಿತರಿಸಲಾಗುತ್ತಿದ್ದು, ಎಲ್ಲೆಡೆ ಸೂಕ್ತ ಎಚ್ಚರಿಕಾ ಫಲಕಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.
ಜಿಲ್ಲೆಗೆ ಈವರೆಗೆ 3,850 ಬಾಟಲಿ ಡಿಎಂಪಿ ತೈಲ ಸರಬರಾಜಾಗಿದ್ದು, ಹೆಚ್ಚಿನ ತೈಲಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಅದು ಶೀಘ್ರವೇ ದೊರೆಯುವ ನಿರೀಕ್ಷೆ ಇದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ 171 ಶಂಕಿತ ಮಂಗನ ಕಾಯಿಲೆ ರೋಗಿಗಳು ದಾಖಲಾಗಿದ್ದು, ಇವರಲ್ಲಿ 146 ಮಂದಿ ಗುಣಮುಖ ರಾಗಿ ತೆರಳಿದ್ದಾರೆ. ಒಟ್ಟು 64 ಮಂದಿಯಲ್ಲಿ ಕೆಎಫ್‌ಡಿ ವೈರಸ್ ಸೋಂಕು ಪತ್ತೆಯಾಗಿದ್ದು, 107 ಮಂದಿಯಲ್ಲಿ ಸೋಂಕು ಕಂಡುಬಂದಿಲ್ಲ. 25 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಮಂಗನ ಕಾಯಿಲೆಗೆ ಜಿಲ್ಲಾ ನೋಡೆಲ್ ಅಧಿಕಾರಿಯಾಗಿರುವ ಡಾ. ಪ್ರಶಾಂತ್ ಭಟ್ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಓ ಸಿಂಧೂ ಬಿ ರೂಪೇಶ್, ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್,ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಸಜ್ಜನ್ ಶೆಟ್ಟಿ, ಉಪ ನಿರ್ದೇಶಕ ಡಾ. ರಾಮಚಂದ್ರ ಬಾಯರಿ, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಶಿವಕುಮಾರ್ ವೀರಯ್ಯ, ಡಿಎಚ್‌ಒ ಡಾ.ರೋಹಿಣಿ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.