×
Ad

ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಸರಕಾರದಿಂದ ನೆರವು: ಸಚಿವ ರೇವಣ್ಣ

Update: 2019-02-08 21:07 IST

ಬೆಳ್ತಂಗಡಿ, ಫೆ. 8: ನಾಡಿನ ಜನರಿಗೆ ಒಳಿತನ್ನು ಬಯಸುವ ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳಿಗೆ ಸರಕಾರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಇಂದು ನಡೆದ ಸಂತಸಮ್ಮೇಳನದಲ್ಲಿ ಭಾಗವಹಿಸಿ ಮಹಾಮಸ್ತಕಾಭಿಷೇಕದ ಅಂಗವಾಗಿ ಕ್ಷೇತ್ರದ ವತಿಯಿಂದ ಆಯೋಜಿಸಲಾಗುತ್ತಿರುವ 100 ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ದರು. ಕ್ಷೇತ್ರಕ್ಕೆ ಬರುವ ಭಕ್ತರಿಗೆ ನೆರವಾಗಲೆಂದು ರಸ್ತೆಗಳ ಅಭಿವೃದ್ದಿಗೆ ರಾಜ್ಯ ಸರಕಾರ ಈಗಾಗಲೆ 23 ಕೋಟಿ ಅನುದಾನ ನೀಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿದೆ. ಕ್ಷೇತ್ರದ ಸೌರ್ದೈಕ್ಕಾಗಿ ಹೈಮಾಸ್ಕ್ ಲೈಟ್‍ಗಳನ್ನು ಅಳವಡಿಸುವುದಕ್ಕಾಗಿ ಎರಡು ಕೋಟಿ ಅನುದಾನವನ್ನು ಮಂಜೂರುಗೊಳಿಸಿರುವುದಾಗಿ ಪ್ರಕಟಿಸಿದರು. ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳ ರಸ್ತೆಗಳ ಅಭಿವೃದ್ದಿಗೆ ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ ಎಂದು ವಿವರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹಮ್ಮಿಕೊಳ್ಳಲಾಗುತ್ತಿರುವ ಕೆರಗೆಗಳ ಪುನಶ್ಚೇತನ ಕಾರ್ಯಕ್ರಮಗಳಿಗೆ ಸೆಲ್ಲರೀತಿಯ ಸಹಕಾರವನ್ನೂ ನೀಡುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳದ ಧಮಾರ್ಧಿಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಜಗತ್ತನ್ನು ಒಟ್ಟು ಸೇರಿಸುವ ಶಕ್ತಿಯಿರುವುದು ಧರ್ಮಕ್ಕೆ ಮಾತ್ರವಾಗಿದೆ. ಇಂದು ರಾಜಕೀಯವು ನಮ್ಮನ್ನು ವಿಭಜಿಸುವ ಕಾರ್ಯವನ್ನು ಮಾಡುತ್ತಿರುವ ಸಂದರ್ಭದಲ್ಲಿ ಭರತ ಬಾಹುಬಲಿಯ ಶಾಂತಿಯ ತ್ಯಾಗದ ಸಂದೇಶಗಳು ಹೆಚ್ಚು ಪ್ರಸ್ತುತವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಚಾರ್ಯ 108 ವರ್ಧಮಾನ ಸಾಗರ ಮುನಿಮಹಾರಾಜರು, ಹಾಗೂ ಆಚಾರ್ಯ 108 ಪುಷ್ಪದಂತ ಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ದಾನಶಾಲೆಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಯವರು ವಹಿಸಿದ್ದರು.  ಹುಂಬುಜದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ನೀಡಿ ತಮ್ಮ ಅಹಂಗಾಗಿ ಜಗತ್ತಿನ ಶಾಂತಿಯನ್ನು ಕದಡುವವರನ್ನು, ಯಾರದೋ ಶಕ್ತಿ ಪ್ರದರ್ಶನಕ್ಕಾಗಿ ಸಾಮಾನ್ಯ ಜನರು ಬಲಿಯಾಗುವಂತಹ ದುರಂತಗಳನ್ನು ನಾವು ನೋಡುತ್ತಿದ್ದೇವೆ, ಭರತ ಬಾಹುಬಲಿಯ ಸಂದೇಶಗಳನ್ನು ಇವರಿಗೆ ತಲುಪಿಸಬೇಕಾಗಿದೆ. ಯುದ್ದ ಅಧಿಕಾರ ಗೆಲುವುಗಳು ಶಾಶ್ವತವಲ್ಲ, ಅದೆಲ್ಲವೂ ಕ್ಷಣಿಕ ಮಾತ್ರ, ಎಂಬ ಸಂದೇಶ ಸಾರಲು ಈ ಮಹಾಮಸ್ತಕಾಭಿಷೇಕ ದಿಂದ ಸಾಧ್ಯವಾಗಲಿ ಎಂದರು.

ಒಡಿಯೂರು ಗುರುದೇವ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಅಹಿಂಸೆಯೇ ಪರಮಶ್ರೇಷ್ಠವಾಗಿದ್ದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಸಂತರಿಗೂ ಸಮಾಜಕ್ಕೂ ಹತ್ತಿರದ ಸಂಬಂಧವಿದ್ದು ಸಂತರಿಂದ ಸಮಾಜದ ಶುದ್ದೀಕರಣ ಸಾಧ್ಯವಾಗುತ್ತದೆ ಎಂದರು. 

ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ವೀರಾಜಪೇಟೆ ಕಳಂಚೇರಿಯ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು, ಮಾಣಿಲದ ಮೋಹನದಾಸ ಸ್ವಾಮೀಜಿಯವರು, ಹಾಗೂ ಸಂತೋಷ್ ಗುರೂಜಿಯವರು ಆಶೀರ್ವಚನ ನೀಡಿದರು. ಹಿರಿಯ ಸಾಹಿತಿ ಏರ್ಯ ಲಕ್ಷಮೀನಾರಾಯಣ ಆಳ್ವ,  ಸುರೇಂದ್ರಕುಮಾರ್, ಹರ್ಷೇಂದ್ರಕುಮಾರ್ ದೇವೇಗೌಡ ಅವರ ಪುತ್ರಿ ಶೈಲಜ ಉಪಸ್ಥಿತರಿದ್ದರು. 

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ಬೆಳ್ಳಿಯ ದೀಪವನ್ನು ಉರಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. 

''ಹಿಂದಿನ ಮೂರನೆ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿಯೂ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ಮಹಾಮಸ್ತಕಾಭಿಷೆಕದ ಯಶಸ್ವಿಗೆ ಸಹಕರಿಸಿದ್ದರು. ಇದೀಗ ಯೋಗಾಯೋಗವೆಂಬಂತೆ ಇದೀಗ ನಾಲ್ಕನೆಯ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿಯೂ ಅವರೇ ಮುಖ್ಯಮಂತ್ರಿಗಳಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡುತ್ತಿದ್ದಾರೆ''. 
-ಡಾ. ಡಿ ವೀರೇಂದ್ರ ಹೆಗ್ಗಡೆ

ಮುಖ್ಯ ಮಂತ್ರಿ ಧರ್ಮಸ್ಥಳಕ್ಕೆ

ಅಮೃತವರ್ಷಿಣಿ ಸಭಾಭವನದಲಿ ಜನಮಂಗಲ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಕ್ಷೇತ್ರದ ಪರಿಸರದಲ್ಲಿ ಆಗಿರುವ ಚತುಷ್ಪಥ ರಸ್ತೆಯ ಪ್ರಥಮ ಹಂತದ ಉದ್ಘಾಟನೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಲಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ರಾಜ್ಯದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಯದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕರ್ನಾಟಕ ಸರಕಾರದೊಂದಿಗೆ ಮಾಡಿರುವ ಕೆರೆ ಸಂಜೀವಿನಿ ಕಾರ್ಯಕ್ರಮದ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. 

ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀ ಆಶೀರ್ವದಿಸಲಿದ್ದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಹಾಗು ಭೋಜೇ ಗೌಡ ಮುಖ್ಯ ಅತಿಥಿಗಳಾಗಿರುತ್ತಾರೆ.

ಈ ಬಾರಿಯ ಪ್ರಮುಖ ಆಕರ್ಷಣೆಗಳಲ್ಲೊಂದಾದ ಲೇಸರ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಇಂದು ಸಂಜೆ 7 ಗಂಟೆಗೆ ರತ್ನಗಿರಿಯಲ್ಲಿ ನಡೆಯಲಿದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ, ಕನ್ನಡ ಚಲನ ಚಿತ್ರ ನಟ ರಮೇಶ್ ಅರವಿಂದ ಲೇಸರ್ ಶೋ ಗೆ ಚಾಲನೆ ನೀಡಲಿದ್ದಾರೆ. ಗೋಮ್ಮಟೇಶ್ವರ ಮೂರ್ತಿಯ ಶಿಲ್ಪಿ ರೆಂಜಾಳ ಶ್ರೀ ಗೋಪಾಲಕೃಷ್ಣ ಶೆಣೈಯವರ ಮೂರ್ತಿಯ ಅನಾವರಣವನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಮಾಡಲಿದ್ದಾರೆ. ಇದೇ ಸಂದರ್ಭ ಶೆಣೈಯವರ ಪ್ರಸಕ್ತ ತಲೆಮಾರಿನ ಪ್ರತಿನಿಧಿಗಳಿಗೆ ಸಮ್ಮಾನ ನೆರವೇರಲಿದೆ. ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಶಾಸಕ ಹರೀಶ್ ಪೂಂಜ, ಡಾ. ಎಂ. ಮೋಹನ ಆಳ್ವ ಅತಿಥಿಗಳಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News