ಉಡುಪಿ: ಎರಡು ದಿನಗಳಲ್ಲಿ 12 ಮಂಗಗಳ ಶವ ಪತ್ತೆ
ಉಡುಪಿ, ಫೆ.8: ಜಿಲ್ಲೆಯ ವಿವಿಧೆಡೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಒಟ್ಟು 12 ಸತ್ತ ಮಂಗಗಳ ಕಳೇಬರ ಪತ್ತೆಯಾಗಿದ್ದು, ಇವುಗಳಲ್ಲಿ ನಾಲ್ಕು ಮಂಗಗಳ ಅಟಾಪ್ಸಿ ನಡೆಸಿ ವಿಸೇರಾವನ್ನು ಪರೀಕ್ಷೆಗಾಗಿ ಮಣಿಪಾಲ ಮತ್ತು ಶಿವಮೊಗ್ಗಗಳ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಮಂಗನ ಕಾಯಿಲೆ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಗುರುವಾರ ಕಾರ್ಕಳ ತಾಲೂಕಿನ ಪಳ್ಳಿ, ಹೆಬ್ರಿ ಪಿಎಚ್‌ಸಿಯ ಶಿವಪುರ, ನಿಟ್ಟೆ, ಉಡುಪಿ ತಾಲೂಕಿನ ಆವರ್ಸೆಯ ಕುಕ್ಕುಂಜೆ, ಕೊಳಲಗಿರಿಯ ಇರ್ಮಾಡಿ ಹಾವಂಜೆ ಹಾಗೂ ಕುಂದಾಪುರ ತಾಲೂಕಿನ ಬಿದ್ಕಲ್‌ಕಟ್ಟೆಯ ಮೊಳಹಳ್ಳಿಗಳಲ್ಲಿ ಮಂಗಗಳ ಶವ ಪತ್ತೆಯಾಗಿವೆ.
ಅದೇ ರೀತಿ ಶುಕ್ರವಾರ ಉಡುಪಿ ತಾಲೂಕಿನ ಬ್ರಹ್ಮಾವರ ಪಿಎಚ್‌ಸಿಯ ಹೇರೂರು, ಆವರ್ಸೆಯ ಹಿಲಿಯಾಣಗಳಲ್ಲಿ ಮತ್ತು ಕಾರ್ಕಳ ತಾಲೂಕಿನ ಹೆಬ್ರಿ ಪಿಎಚ್‌ಸಿಯ ಹೆಬ್ರಿ ಮತ್ತು ಶಿವಪುರ (3)ಗಳಲ್ಲಿ ಒಟ್ಟು ಆರು ಮಂಗಗಳ ಶವ ಸಿಕ್ಕಿವೆ. ಇವುಗಳಲ್ಲಿ ನಾಲ್ಕು -ಪಳ್ಳಿ, ನಿಟ್ಟೆ, ಹಿಲಿಯಾಣ ಹಾಗೂ ಹೆಬ್ರಿ-ನಾಲ್ಕು ಮಂಗಗಳ ಪೋಸ್ಟ್‌ಮಾರ್ಟಂ ನಡೆಸಿ ವಿಸೇರಾವನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದವರು ತಿಳಿಸಿದರು.
ಮೂವರ ರಕ್ತ ಪರೀಕ್ಷೆ: ನಿನ್ನೆಯಿಂದ ಮತ್ತೆ ಮೂವರು ರೋಗಿಗಳ ರಕ್ತವನ್ನು ಶಂಕಿತ ಮಂಗನಕಾಯಿಲೆಗಾಗಿ ಪರೀಕ್ಷೆಗೆ ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇವರಲ್ಲಿ ಇಬ್ಬರ ರಕ್ತದಲ್ಲಿ ಸೋಂಕು ಪತ್ತೆಯಾಗಿಲ್ಲ. ಒಬ್ಬರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 29 ಮಂದಿಯ ರಕ್ತವನ್ನು ಕೆಎಫ್‌ಡಿ ಸೋಂಕಿಗಾಗಿ ಪರೀಕ್ಷೆಗೊಳಪಡಿ ಸಲಾಗಿದ್ದು ಇದರಲ್ಲಿ 28 ಮಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ. ಒಂದರ ವರದಿಗಾಗಿ ಕಾಯಲಾಗುತ್ತಿದೆ ಎಂದು ಡಾ.ಭಟ್ ನುಡಿದರು.
ಕೆಎಫ್‌ಡಿ ವೈರಸ್ ಸೋಂಕು ಪತ್ತೆಯಾದ ಎಲ್ಲಾ ಪಿಎಚ್‌ಸಿ ವ್ಯಾಪ್ತಿಯಲ್ಲಿ ಡಿಎಂಪಿ ತೈಲವನ್ನು ವಿತರಿಸಲಾಗುತ್ತಿದೆ. ಅದೇ ರೀತಿ ಅಲ್ಲಿ ಮನೆಮನೆಗಳಲ್ಲಿ ಜ್ವರ ಸಮೀಕ್ಷೆಯನ್ನೂ ನಡೆಸುವುದರ ಜೊತೆಜೊತೆಗೆ ಮಂಗನ ಕಾಯಿಲೆ ಬಾರದಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಆಶಾ ಕಾರ್ಯಕರ್ತೆಯರ ಮೂಲಕ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕುರಿತು ಸಮೀಕ್ಷೆಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮದನ್‌ಗೋಪಾಲ್ ನೇತೃತ್ವದಲ್ಲಿ ಬೆಂಗಳೂರಿನಿಂದ ಬಂದಿರುವ ಸತ್ಯ ಶೋಧನಾ ಸಮಿತಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿತಲ್ಲದೇ, ಮಣಿಪಾಲದ ಎಂಸಿವಿಆರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಮಂಗನಕಾಯಿಲೆಯ ವೈರಸ್‌ನ್ನು ಹರಡುವ ಉಣ್ಣಿಯ ಕುರಿತಂತೆ ಜನರು ಹೆಚ್ಚು ಜಾಗೃತರಾಗಿರಬೇಕೆಂದು ಸಮಿತಿ ಅಭಿಪ್ರಾಯ ಪಟ್ಟಿತು.
ಮಣಿಪಾಲದಲ್ಲಿ 34 ಮಂದಿಗೆ ಚಿಕಿತ್ಸೆ: ಶಂಕಿತ ಮಂಗನಕಾಯಿಲೆಯ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ತಾಲೂಕುಗಳ 171 ಮಂದಿ ಈವರೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಐವರು ಜ್ವರ ಮರುಕಳಿಸಿದ್ದರಿಂದ ಮರು ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ 64 ಮಂದಿಯಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿದ್ದರೆ, 105 ಮಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ. ಏಳು ಮಂದಿಯ ವರದಿ ಇನ್ನಷ್ಟೇ ಬರಬೇಕಿದೆ.
ಇವರಲ್ಲಿ 138 ಮಂದಿ ಈಗಾಗಲೇ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖ ರಾಗಿ ಆಸ್ಪತೆಯಿಂದ ಬಿಡುಗಡೆಗೊಂಡಿದ್ದಾರೆ. 34 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಕೆಎಂಸಿ ಇಂದು ಸಂಜೆ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.