ನೆನಪುಗಳನ್ನು ಕಟ್ಟಿಕೊಡುವ ಶಕ್ತಿಶಾಲಿ ಮಾಧ್ಯಮ ಸಿನಿಮಾ: ಜೋಗಿ
ಉಡುಪಿ, ಫೆ.8: ವಿಷ್ಯುವಲ್ ಮೀಡಿಯಾಗಳಲ್ಲಿ ಸಿನಿಮಾದ ಜಗತ್ತೇ ಬೇರೆ ಇದೆ. ನೆನಪುಗಳನ್ನು ನಿರಂತರವಾಗಿ ಕಟ್ಟಿಕೊಂಡುವ ಶಕ್ತಿಶಾಲಿ ಮಾಧ್ಯಮವೇ ಸಿನಿಮಾ ಎಂದು ಚಿತ್ರಕಥೆ, ಸಂಭಾಷಣೆಕಾರ ಹಾಗೂ ಹಿರಿಯ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ) ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದ ಒಂದು ದಿನದ ಚಲನಚಿತ್ರ ಕುರಿತ ವಿಚಾರ ಸಂಕಿರಣ‘ಕ್ಲಾಪ್‌ಬೋರ್ಡ್ ಆ್ಯಂಡ್ ಬಿಯಾಂಡ್’ ವನ್ನು ಉದ್ಘಾಟಿಸಿ ‘ಸಿನಿಮಾ ಎಂಬ ಔಟ್‌ಡೇಟೆಡ್ ಮಾಧ್ಯಮ’ ಎಂಬ ವಿಷಯದ ಕುರಿತು ಮಾತನಾಡುತಿದ್ದರು.
ಚಿಕ್ಕಂದಿನಿಂದಲೂ ನಾವೆಲ್ಲರೂ ಸಿನಿಮಾಗಳನ್ನು ನೋಡುತ್ತಾ ಬೆಳೆದವರು. ಸಿನಿಮಾ ನಮ್ಮ ಹಲವು ನೆನಪುಗಳು ಮರುಕಳಿಸುವಂತೆ ಮಾಡಿದೆ. ಸಿನಿಮಾದ ದೊಡ್ಡ ಕೊಡುಗೆ ಲಯವನ್ನು ಕೊಟ್ಟಿದ್ದು. ಜಯಂತ್ ಕಾಯ್ಕಿಣಿಯವರ ಕವನ (ಹಾಡು)ಗಳನ್ನು ಓದುವಂತೆ ಮಾಡಿರುವುದು ಈ ಸಿನಿಮಾಗಳೇ ಎಂದು ಸಿನಿಮಾ ಪತ್ರಕರ್ತರಾದ ಜೋಗಿ ನುಡಿದರು.
ಸಿನಿಮಾ ಸೃಷ್ಟಿಸುವ ಮಾಯಾಲೋಕ ಎಲ್ಲರನ್ನೂ ಅದರತ್ತ ಸೆಳೆಯುವಂತೆ ಮಾಡುತ್ತದೆ. ನಟರು ಸುಂದರವಾಗಿರಲೇ ಬೇಕಾಗಿಲ್ಲ ಎಂಬುದನ್ನು ಇತ್ತೀಚಿನ ಕೆಲವು ಚಿತ್ರಗಳು ತೋರಿಸಿಕೊಟ್ಟಿವೆ.ರಂಜನೆ ಸಿನಿಮಾದ ಮುಖ್ಯ ಉದ್ದೇಶ. ಹಲವು ವಿಭಾಗಗಳ ಚಿಂತನೆಗಳು ಸೇರಿ ಸಿನಿಮಾ ಆಗುತ್ತದೆ ಎಂದರು.
ಪ್ರಖರ ಬೆಳಕಿನಲ್ಲಿ ತಯಾರಾಗುವ ಸಿನಿಮಾವನ್ನು ಕತ್ತಲಲ್ಲಿ ಕುಳಿತು ನೋಡುತ್ತೇವೆ. ಹಲವು ಸಂಕೇತಗಳನ್ನು ಈ ಸಿನಿಮಾ ನೀಡಿದೆ. ನಮ್ಮ ಪ್ರಜ್ಞೆಯನ್ನು ಸಹ ಅದು ರೂಪಿಸುತ್ತಾ ಬಂದಿದೆ. ಆದರೂ ಸಹ ಸಿನಿಮಾ ಇಂದಿನ ಮಾಧ್ಯಮವಾಗಿ ಔಟ್‌ಡೇಟೆಡ್ ಎನಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.
ಕಳೆದ ಸುಮಾರು ಒಂದು ಶತಮಾನದಲ್ಲಿ ಸಿನಿಮಾ ಸಾಕಷ್ಟು ಬದಲಾಗಿದೆ. ಆಗ ಮಾಡುತಿದ್ದಂತೆ ಈಗ ಕಥೆ ಬರೆಯುತ್ತಿಲ್ಲ, ಈಗ ಸಿನಿಮಾ ಬರೆಯುತ್ತೇವೆ. ಸಿನಿಮಾವನ್ನು ಕೆಮರಾದ ಮೂಲಕ ಬರೆಯಲಾಗುತ್ತಿದೆ. ಇಂದು ಬರುವ ಸಿನಿಮಾಗಳನ್ನು ಸಿನಿಮಾ ಭಾಷೆಯಲ್ಲಿ ಬರೆಯಲಾಗುತ್ತದೆ. ಅಂದು ಅಕ್ಷರದಲ್ಲಿ ಬರೆಯುತಿದ್ದುದನ್ನು ಇಂದು ಕೆಮರಾದಲ್ಲಿ ಬರೆಯಲಾಗುತ್ತದೆ. ಹೀಗಾಗಿ ಸಿನಿಮಾ ಇಂದು ಔಟ್‌ಡೇಟೆಡ್ ಆಗಿದೆ ಎಂದರು.
ಸಿನಿಮಾ ಬೆಳೆದು ಬಂದಾಗ ಇದ್ದ ಹಲವು ವಿಭಾಗಗಳನ್ನು ಕಳೆದುಕೊಂಡು ಇಂದು ಸಿನಿಮಾ ಕೆಮರಾದಲ್ಲಿ ಸೃಷ್ಟಿಗೊಳ್ಳುತ್ತಿದೆ. ಹೀಗೆ ಸಿನಿಮಾದಲ್ಲಿ ದೊಡ್ಡ ಬದಲಾವಣೆಯಾಗಿದೆ. ಅದನ್ನು ಮಾಡುವ ವಿಧಾನ ಔಟ್‌ಡೇಟೆಡ್ ಆಗಿದೆ ಎಂದು ಜೋಗಿ ಹೇಳಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಲತಿ ದೇವಿ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಅರುಣ್‌ಕುಮಾರ್ ಉಪಸ್ಥಿತರಿದ್ದರು.
ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಮಂಜುನಾಥ ಕಾಮತ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ವಿದ್ಯಾರ್ಥಿನಿ ಸೌಜನ್ಯ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಜಸ್ಟಿನ್ ಡಿಸಿಲ್ವ ವಂದಿಸಿದರು.
ಬಳಿಕ ವಿವಿಧ ವಿಷಯಗಳ ಕುರಿತಂತೆ ಉಪನ್ಯಾಸ ಹಾಗೂ ಸಂವಾದ ನಡೆದವು. ಬಿ.ಎ.ಸಂವರ್ತ ಸಾಹಿಲ್, ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ ಉಪನ್ಯಾಸ ನೀಡಿದರು.