ಭಾರತವನ್ನು ‘ಶೂನ್ಯ ಆಮದು ತೆರಿಗೆ’ಯಿಂದ ಹೊರಗಿಡಲು ಅಮೆರಿಕ ಚಿಂತನೆ?

Update: 2019-02-08 16:37 GMT

ವಾಶಿಂಗ್ಟನ್, ಫೆ. 8: ಭಾರತ ಮತ್ತು ಅಮೆರಿಕಗಳ ನಡುವಿನ ವ್ಯಾಪಾರ ಸಮರದ ಹಿನ್ನೆಲೆಯಲ್ಲಿ, ಶೂನ್ಯ ಆಮದು ತೆರಿಗೆಗೆ ಅವಕಾಶ ಮಾಡಿಕೊಡುವ ಅಮೆರಿಕದ ಪ್ರಮುಖ ವ್ಯಾಪಾರ ರಿಯಾಯಿತಿಯೊಂದನ್ನು ಭಾರತ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ರಿಯಾಯಿತಿಯಡಿಯಲ್ಲಿ, ಭಾರತಕ್ಕೆ 5.6 ಬಿಲಿಯ ಡಾಲರ್ (39,900 ಕೋಟಿ ರೂಪಾಯಿ) ಮೊತ್ತದ ವಸ್ತುಗಳನ್ನು ಶೂನ್ಯ ಆಮದು ತೆರಿಗೆಯೊಂದಿಗೆ ಅಮೆರಿಕಕ್ಕೆ ರಫ್ತು ಮಾಡಬಹುದಾಗಿದೆ.

ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್ (ಜಿಎಸ್‌ಪಿ) ಯೋಜನೆಯು 1970ರ ದಶಕದಿಂದಲೂ ಚಾಲ್ತಿಯಲ್ಲಿದೆ. ಭಾರತ ಈ ಯೋಜನೆಯ ಜಗತ್ತಿನ ಅತಿ ದೊಡ್ಡ ಫಲಾನುಭವಿಯಾಗಿದೆ. ಇದನ್ನು ಅಮೆರಿಕ ಹಿಂದಕ್ಕೆ ಪಡೆದುಕೊಂಡರೆ, ಭಾರತದ ವಿರುದ್ಧ ಡೊನಾಲ್ಡ್ ಟ್ರಂಪ್ ಆಡಳಿತ ತೆಗೆದುಕೊಳ್ಳುವ ಅತಿ ದೊಡ್ಡ ದಂಡನಾ ಕ್ರಮವಾಗಿದೆ.

ಅಮೆರಿಕದ ವಸ್ತುಗಳ ಆಮದಿಗೆ ಭಾರತ ವಿಧಿಸುವ ಅಧಿಕ ಆಮದು ತೆರಿಗೆಯನ್ನು ಟ್ರಂಪ್ ಪದೇ ಪದೇ ಟೀಕಿಸುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತನ್ನ ‘ಮೇಕ್ ಇನ್ ಇಂಡಿಯ’ ಕಾರ್ಯಕ್ರಮದ ಮೂಲಕ ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಟ್ರಂಪ್ ತನ್ನ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ನೀತಿಯ ಭಾಗವಾಗಿ, ಅಮೆರಿಕ ಉದ್ಯಮಗಳು ಸ್ವದೇಶಕ್ಕೆ ಮರಳುವಂತೆ ಮಾಡುತ್ತಿದ್ದಾರೆ.

ಅಮೆರಿಕದ ಆನ್‌ಲೈನ್ ಮಾರುಕಟ್ಟೆಗಳಾದ ಅಮೆಝಾನ್.ಕಾಮ್ ಇಂಕ್ ಮತ್ತು ವಾಲ್ಮಾರ್ಟ್ ಬೆಂಬಲಿತ ಫ್ಲಿಪ್‌ಕಾರ್ಟ್‌ಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಭಾರತ ತಂದಿರುವ ನೂತನ ನೀತಿಗಳಿಗೆ ಪ್ರತಿಯಾಗಿ ಅಮೆರಿಕ ಶೂನ್ಯ ಆಮದು ತೆರಿಗೆ ಕಾರ್ಯಕ್ರಮವನ್ನು ರದ್ದುಪಡಿಸಲು ಮುಂದಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News