×
Ad

ಮಂಗಳೂರು: ಬ್ಯಾರಿ ಮೇಳದಲ್ಲಿ ಮೇಳೈಸಿದ ಫುಡ್‌ಕೋರ್ಟ್

Update: 2019-02-08 22:25 IST

ಮಂಗಳೂರು, ಫೆ.8: ನಗರದ ಪುರಭವನದಲ್ಲಿ ಬಿಸಿಸಿಐ ಆಯೋಜಿಸಿರುವ ಬ್ಯಾರಿ ಮೇಳದಲ್ಲಿ ‘ಫುಡ್‌ಕೋರ್ಟ್’ ಮೇಳೈಸಿದ್ದು, ಸಾವಿರಾರು ಗ್ರಾಹಕರು ಮೊದಲ ದಿನವೇ ಫುಡ್‌ಕೋರ್ಟ್‌ಗೆ ಲಗ್ಗೆಯಿಟ್ಟು ಬಗೆಬಗೆಯ ಖಾದ್ಯ ತಿನಿಸುಗಳ ಸಹಿತ ಆಹಾರ ಪದಾರ್ಥಗಳನ್ನು ಸವಿದು ಬಾಯಿ ಚಪ್ಪರಿಸಿದರು.

20ಕ್ಕೂ ಅಧಿಕ ಆಹಾರ ಮಳಿಗೆಗಳಲ್ಲಿ ಅಧಿಕ ಸಂಖ್ಯೆಯಲ್ಲಿರುವ ಬ್ಯಾರಿ ಮುಸ್ಲಿಂ ಮಹಿಳೆಯರು ಸ್ಥಳದಲ್ಲೇ ಆಹಾರ ತಯಾರಿಸಿ ಮಾರಾಟದಲ್ಲೂ ತೊಡಗಿಸಿಕೊಂಡು ಬ್ಯಾರಿ ಸಮುದಾಯವು ‘ಶ್ರಮಜೀವಿ’ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

ಚಿಕನ್, ಮಟನ್ ಐಟಂಗಳಲ್ಲದೆ ಚಹಾ, ಕಾಫಿ, ತಂಪು ಪಾನೀಯ, ಐಸ್‌ಕ್ರೀಂ, ಹಣ್ಣು ಹಂಪಲುಗಳ ಮಳಿಗೆಯೂ ಕಂಡು ಬಂತು. ಕೇರಳದ ಆಹಾರವೂ ಕೂಡ ಮಳಿಗೆಗಳಲ್ಲಿ ಗಮನ ಸೆಳೆಯಿತು.

ಬಂಗುಡೆ, ಮಾಂಜಿ, ಅಂಜಲ್ ಸಹಿತ ಸ್ಥಳದಲ್ಲೇ ಮೀನುಗಳನ್ನು ಹುರಿದು ಕೊಡುವ ದೃಶ್ಯವೂ ಸಾಮಾನ್ಯವಾಗಿತ್ತು. ಉಳಿದಂತೆ ವಿವಿಧ ಬಗೆಯ ಉಪ್ಪಿನಕಾಯಿಯ ಮಾರಾಟ ಕೂಡ ಭರಾಟೆ ಪಡೆದುಕೊಂಡಿತು.

ಬಿ.ಸಿ.ರೋಡ್ ಸಮೀಪದ ತಲಪಾಡಿಯ ಕುಟುಂಬವೊಂದರ ಮಹಿಳಾ ಸದಸ್ಯರಾದ ಡಾ. ಬೆನಝಿರ್ ಫಾತಿಮಾ, ಆಯಿಶತ್ ಶಹನಾಝ್, ಫಮೀದಾ ಅಝೀಝ್ ಮತ್ತಿತರರು ಸ್ವತಃ ಮನೆಯಲ್ಲೇ ವಿವಿಧ ಬಗೆಯ ಆಹಾರವಲ್ಲದೆ, ಚಾಕ್ಲೆಟ್ ಇತ್ಯಾದಿಯನ್ನು ತಯಾರಿಸಿ ಮಾರಾಟ ಮಾಡಿ ಸೈ ಎನಿಸಿದರು.

‘ನಾವು ಮೊದಲ ಬಾರಿಗೆ ಇಂತಹ ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ. ನಮಗೆ ಇಲ್ಲಿ ವ್ಯಾಪಾರವೇ ಮುಖ್ಯವಲ್ಲ. ಶುಚಿ-ರುಚಿಯಾದ ಅಡುಗೆಯನ್ನು ಗ್ರಾಹಕರಿಗೆ ನೀಡುವುದಕ್ಕೆ ಆದಯತೆ ನೀಡುತ್ತೇವೆ. ಮೊದಲ ದಿನವೇ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ಡಾ.ಬೆನಝೀರ್ ಫಾತಿಮಾ ನುಡಿದರು.

ಈ ಸಂದರ್ಭ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಪಾಂಡೇಶ್ವರದ ಅಮನ್ ಮೊಯ್ದಿನ್ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸವಿಯಲು ಇದೊಂದು ಅಪೂರ್ವ ಅವಕಾಶವಾಗಿದೆ. ನಮ್ಮ ನಿರೀಕ್ಷೆಗೂ ಮೀರಿದ ಆಹಾರಗಳು ಇಲ್ಲಿವೆ. ಭಕ್ಷಪ್ರಿಯರು ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕಾಗಿದೆ’ ಎಂದರು.

ಉಳಿದಂತೆ ವಸ್ತುಪ್ರದರ್ಶನದ ಮಳಿಗೆಗಳಲ್ಲಿ ಬಿಲ್ಡರ್ ಮೆಟೀರಿಯಲ್ಸ್, ಹಾರ್ಡ್‌ವೇರ್ ಮೆಟೀರಿಯಲ್ಸ್, ಫರ್ನಿಚರ್ಸ್‌, ಪ್ಲೈವುಡ್ಸ್, ಬ್ಯಾರಿಗಳು ನಡೆಸುವ ಶಿಕ್ಷಣ ಸಂಸ್ಥೆಗಳ ಮಳಿಗೆಗಳಲ್ಲದೆ ಅತ್ತರ್- ಟೊಪ್ಪಿ ಹಾಗೂ ಪುಸ್ತಕಗಳೂ ಕೂಡ ಇದೆ. ಶನಿವಾರ ಮತ್ತು ರವಿವಾರ ಕೂಡ ಈ ಎಲ್ಲಾ ಮಳಿಗೆಗಳು ತೆರೆದಿರುತ್ತದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News