ಲಂಚ ಆಮಿಷ ಆರೋಪ ಬಗ್ಗೆ ತನಿಖೆಯಾಗಲಿ: ಐವನ್ ಡಿಸೋಜ
ಮಂಗಳೂರು, ಫೆ. 9: ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರನ್ನು ದೇವದುರ್ಗಕ್ಕೆ ಕರೆಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ 10 ಕೋಟಿ ರೂ. ಲಂಚದ ಆಮಿಷ ಒಡ್ಡಿರುವುದು, ವಿಧಾನಸಭಾಧ್ಯಕ್ಷರಿಗೆ 50 ಕೋಟಿ ರೂ. ನೀಡಿದ್ದೇವೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯಬೇಕು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯರ್ಶಿ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಡಿಯೊ ಟೇಪ್‌ನಲ್ಲಿರೋದು ಶೇ.100ರಷ್ಟು ಯಡಿಯೂರಪ್ಪ ಅವರದ್ದೇ ಧ್ವನಿ. ನರೇಂದ್ರ ಮೋದಿ, ಅಮಿತ್ ಶಾ ಅವರು ನ್ಯಾಯಾಧೀಶರನ್ನೂ ಬುಕ್ ಮಾಡಲಿದ್ದಾರೆ ಎಂದೂ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದ ತನಿಖೆ ಮೇಲೆ ನಂಬಿಕೆಯಿಲ್ಲವಾದರೆ ಸಿಬಿಐನಿಂದಲೇ ತನಿಖೆ ನಡೆಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಯಡಿಯೂರಪ್ಪ ಅವರು ಕಾಂಗ್ರೆಸ್- ಜೆಡಿಎಸ್- ಶಾಸಕರನ್ನು ಸೆಳೆದು ಕುದುರೆ ವ್ಯಾಪಾರದಲ್ಲಿ ತೊಡಗಿರುವುದು ಆಡಿಯೊ ಟೇಪ್ ಮೂಲಕ ಸಾಬೀತಾಗಿದೆ. ಬೇರೆಯವರ ಮೇಲೆ ಐಟಿ ದಾಳಿ ನಡೆಸಿ ಅಕ್ರಮ ದುಡ್ಡು ಕೂಡಿಟ್ಟಿದ್ದಾರೆ ಎನ್ನುವ ಬಿಜೆಪಿಯವರಿಗೆ ಶಾಸಕರನ್ನು ನೀಡಿ ಖರೀದಿಸುವಷ್ಟು ಕೋಟಿಗಟ್ಟಲೆ ರೂ. ಹಣ ಎಲ್ಲಿಂದ ಬಂತು ? ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ಕರ್ನಾಟಕದ ಬಿಜೆಪಿಯವರಿಗೇನಾದರೂ ನೀಡಿದ್ದಾರಾ ಎಂದು ಐವನ್ ಪ್ರಶ್ನಿಸಿದರು.
ಬಿಜೆಪಿಯವರು ಹಣದ ಆಮಿಷವೊಡ್ಡಿ ಶಾಸಕರನ್ನು ಸೆಳೆಯುವ ಯತ್ನವನ್ನು ಕೂಡಲೆ ಕೈಬಿಡಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಬಜೆಟ್ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರ ಭಾಷಣಕ್ಕೆ ಬಿಜೆಪಿಯವರು ಅಡ್ಡಿ ಪಡಿಸಿದ್ದಾರೆ. ಎಷ್ಟೇ ಭಿನ್ನಾಾಭಿಪ್ರಾಯವಿದ್ದರೂ ರಾಜ್ಯಪಾಲರ ಭಾಷಣವನ್ನು ಮೌನವಾಗಿ ಕೇಳುವುದು ಸಂವಿಧಾನ ಬದ್ಧ ಕಾರ್ಯಕ್ರಮ. ಆದರೆ ಬಿಜೆಪಿಯವರು ಅಡ್ಡಿಪಡಿಸಿ ಪ್ರಜಾಪ್ರಭುತ್ವಕ್ಕೆೆ ಧಕ್ಕೆ ತಂದಿದ್ದಾರೆ, ಇದು ಸಂವಿಧಾನಕ್ಕೆ ಕಪ್ಪು ಚುಕ್ಕೆ ಎಂದವರು ಹೇಳಿದರು.
ಬಿಜೆಪಿಯವರು ಬಜೆಟ್ ಅಂಗೀಕಾರ ಆಗದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಅದೆಲ್ಲದಕ್ಕೂ ಕಾಂಗ್ರೆೆಸ್ ಸಿದ್ಧವಾಗಿದೆ. ಬಜೆಟ್ ಅಂಗೀಕಾರ ಆಗಿಯೇ ಆಗುತ್ತದೆ ಎಂದರು.
ಬೇರೊಂದು ಪಕ್ಷದವರೊಂದಿಗೆ ಕೈಜೋಡಿಸುವ ಆಡಳಿತ ಪಕ್ಷದ ಶಾಸಕರನ್ನು ಪಕ್ಷದಿಂದ ಅನರ್ಹಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ವಿಧಾನಸಭಾಧ್ಯಕ್ಷರಿಗೂ ಪತ್ರ ಬರೆಯಲಾಗಿದೆ ಎಂದು ಅವರು ಈ ಸಂದರ್ಭ ಹೇಳಿದರು.
3 ತಿಂಗಳೊಳಗೆ ಕ್ರೈಸ್ತ ನಿಗಮ ಕಚೇರಿ ಆರಂಭವಾಗಲಿ
ಹಲವು ವರ್ಷಗಳ ಬೇಡಿಕೆಯಾದ ಕ್ರೈಸ್ತ ಅಭಿವೃದ್ಧಿಗೆ ನಿಗಮ ಸ್ಥಾಪನೆಯ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಅದಕ್ಕಾಗಿ 200 ಕೋಟಿ ರೂ. ಮೀಸಲಿರಿಸಲಾಗಿದೆ. ಇನ್ನು ಮೂರು ತಿಂಗಳೊಳಗೆ ನಿಗಮದ ಆಡಳಿತ ಕಚೇರಿ, ಜಿಲ್ಲಾ ಕಚೇರಿಗಳು ಕಾರ್ಯಾರಂಭವಾಗುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದರು.