ಸೀರತ್ ಶಿಕ್ಷಕರ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
ಮಂಗಳೂರು, ಫೆ.9: ಸಮಾಜದಲ್ಲಿ ಇಂದು ಎಲ್ಲಾ ಧರ್ಮಗಳನ್ನು ಅಧ್ಯಯನ ನಡೆಸಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷಿ್ಮೀ ನಾರಾಯಣ ಆಳ್ವ ಅಭಿಪ್ರಾಯಿಸಿದ್ದಾರೆ.
ಅವರು ಇಂದು ನಗರದ ಐಎಂಎ ಸಭಾಂಗಣದಲ್ಲಿ ‘ಪ್ರವಾದಿ ಮುಹಮ್ಮದ್(ಸ): ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಸೀರತ್ ಅಭಿಯಾನದ ಅಂಗವಾಗಿ ದ.ಕ ಜಿಲ್ಲೆಯ ಶಿಕ್ಷಕ/ಶಿಕ್ಷಕಿಯರಿಗಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಎಲ್ಲಾ ಧರ್ಮಗಳ ನಡುವೆ ಬೆಳೆದ ನನಗೆ ಜಾತಿ, ಧರ್ಮಗಳನ್ನು ಮೀರಿ ಬೆಳೆಯಲು ಸಾಧ್ಯವಾಗಿದೆ. ಮಾತ್ರವಲ್ಲದೆ, ಕುರ್‌ಆನ್, ಬೈಬಲ್, ಭಗದ್ಗೀತೆ ಮೊದಲಾದ ಧರ್ಮ ಗ್ರಂಥಗಳನ್ನು ಓದಿದ ಕಾರಣಕ್ಕಾಗಿ ಮಾನವೀಯತೆ ಎಲ್ಲಾ ಧರ್ಮಗಲ್ಲಿ ಸಂದೇಶ ಎಂಬ ಅರಿವಿದೆ ಎಂದರು.
ಮಂಗಳೂರು ಯುನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಇರ್ವತ್ತೂರು ಮಾತನಾಡಿ, ಇಂದು ಸಮಾಜದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದ್ದು, ನಾವು ಮಾತನಾಡುವುದನ್ನು ಒತ್ತಡ ಪೂರ್ವಕವಾಗಿ ಹೇರಲಾಗುವ ಪರಿಸ್ಥಿತಿ ಇರುವುದು ಆತಂಕಕಾರಿ, ಇತರ ಧರ್ಮಗಳ ಸಂದೇಶಗಳನ್ನು ಅರಿತುಕೊಳ್ಳುವಲ್ಲಿ ಇಂತಹ ಕಾರ್ಯಕ್ರಮಗಳ ಅತ್ಯವಿದೆ ಎಂದು ಅವರು ಹೇಳಿದರು.
‘ಪ್ರವಾದಿ ಮುಹಮ್ಮದ್ ನನ್ನ ದೃಷ್ಟ್ಟಿಯಲ್ಲಿ’ ಎಂಬ ವಿಷಯದಲ್ಲಿ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಉಳಾಯಿಬೆಟ್ಟು ಸರಕಾರಿ ಹಿ.ಪ್ರಾ. ಶಾಲೆಯ ಚೇತನ್ ಕೊಪ್ಪ ಪಡೆದಿದ್ದು, ಅವರಿಗೆ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು 25,000 ರೂ.ಗಳ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು.
ದ್ವಿತೀಯ ಬಹುಮಾನವಾಗಿ 15,000 ರೂ. ನಗದು ಹಾಗೂ ಪ್ರಮಾಣ ಪತ್ರವನ್ನು ಕೃಷ್ಣಾಪುರ 5ನೆ ಬ್ಲಾಕ್‌ನ ಸರಕಾರಿ ಹೈಸ್ಕೂಲ್ ಮಂಜುಳಾ ಪಡೆದಿದ್ದು, ಪುತ್ತೂರು ಕುಂಬ್ರ ಸರಕಾರಿ ಪಿಯು ಕಾಲೇಜಿನ ಸುಲೇಮಾನ್ ಕೆ. ತೃತೀಯ ಬಹುಮಾನವಾಗಿ 10000 ರೂ. ನಗದು ಹಾಗೂ ಪ್ರಮಾಣ ಪತ್ರ ಸ್ವೀಕರಿಸಿದರು.
ಈ ಸಂದರ್ಭ 11 ಮಂದಿಗೆ ತಲಾ 2000 ರೂ. ನಗದು ಹಾಗೂ ಪ್ರಮಾಣಪತ್ರವನ್ನು ಸಮಾಧಾಕರ ಬಹುಮಾನವಾಗಿ ನೀಡಲಾಯಿತು.
ಸೀರತ್ ಅಭಿಯಾನ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಸಿ.ಪಿ. ಹಬೀಬ್ ರೆಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಬ್ಯಾರೀಸ್ ವೆಲ್ಪೇರ್ ಫೋರಂ ಅಬುಧಾಬಿ ಘಟಕದ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಜಮಾಅತೆ ಇಸ್ಲಾಮಿ ಹಿಂದ್‌ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ.ಎಂ. ಅಶ್ರಫ್, ಸ್ವಾಗತ ಸಮಿತಿಯ ಸದಸ್ಯರಾದ ಕೆ.ಎಂ. ಶರೀಫ್, ನಾಝಿಮ್ ಮೊದಲಾದವರು ಉಪಸ್ಥಿತರಿದ್ದರು.
ಮುಹಮ್ಮದ್ ತುಂಬೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.