ರಾಷ್ಟ್ರೀಯ ಮಾಸ್ಟರ್ ಅಥ್ಲೇಟಿಕ್ಸ್: ವಿಟ್ಲದ ವಿಜಯಭಾರತಿಗೆ ಚಿನ್ನ
ಬಂಟ್ವಾಳ, ಫೆ. 9: ಮಹಾರಾಷ್ಟ್ರದ ನಾಸಿಕ್‍ನ ಮೀನಾತಾಯಿ ಥಾಕ್ರೆ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 39ನೆ ರಾಷ್ಟ್ರೀಯ ಮಾಸ್ಟರ್ ಅಥ್ಲೇಟಿಕ್ಸ್‍ನಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೇಟ್, ವಿಟ್ಲ ನಿವಾಸಿ ವಿಜಯಭಾರತಿ ಎ.ನ್ ಭಟ್ ಅವರು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸಿದ್ದಾರೆ.
ವೇಗದ ನಡಿಗೆಯಲ್ಲಿ ಚಿನ್ನ, 500 ಮೀಟರ್ ಓಟದಲ್ಲಿ ಮತ್ತು ರಿಲೇಯಲ್ಲಿ ಬೆಳ್ಳಿ, 10 ಸಾವಿರ ಮೀಟರ್ ಓಟದಲ್ಲಿ ಕಂಚು ಪದಕ ಪಡೆದು ಕೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಸೇರಿದಂತೆ ಶ್ರೀಲಂಕಾದಿಂದಲೂ ಕ್ರೀಡಾಪಟುಗಳು ಆಗಮಿಸಿದ್ದರು.
ಈಕೆ 2017 ಮತ್ತು 18ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಮಲೇಶಿಯಾ ಮತ್ತು ಥಾಯಿಲ್ಯಾಂಡ್‍ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೂರು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ಪಡೆದುಕೊಂಡಿದ್ದರು. ಈಕೆ ವಿಟ್ಲ ಸಮೀಪದ ಕೆಲಿಂಜ ನಿವಾಸಿಯಾಗಿದ್ದು, ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ.