ನೀರಿನ ಅಭಾವ ನೀಗಿಸಲು 'ಕೆರೆ ಸಂಜೀವಿನಿ ಯೋಜನೆ' : ಸಿಎಂ ಕುಮಾರಸ್ವಾಮಿ

Update: 2019-02-09 14:22 GMT

ಬೆಳ್ತಂಗಡಿ, ಫೆ. 9: ರಾಜ್ಯದಲ್ಲಿನ ನೀರಿನ ಅಭಾವವನ್ನು ನೀಗಿಸಿ ರೈತರಿಗೆ ನೆರವಾಗುವುದಕ್ಕಾಗಿ ಕೆರೆಗಳ ಪುನಶ್ಚೇತನಕ್ಕಾಗಿ ಕೆರೆ ಸಂಜೀವಿನಿ ಯೋಜನೆ ಯನ್ನು ಅನುಷ್ಠಾನಗೊಳಿಸುತ್ತಿದ್ದು, ಈ ವರ್ಷದಿಂದ ಧರ್ಮಸ್ಥಳ ಗ್ರಾಮಭಿವೃದ್ದಿಯೋಜನೆಯೊಂದಿಗೆ ಸೇರಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾ ಗುತ್ತಿದೆ. ಈ ವರ್ಷ 146 ಕೆರೆಗಳನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಜನಕಲ್ಯಾಣ ಕಾರ್ಯಕ್ರಮಗಳ ಸಮಾರಂಭದಲ್ಲಿ ನೇತ್ರಾವತಿಯಿಂದ ಧರ್ಮಸ್ಥಳಕ್ಕೆ ನೂತನವಾಗಿ ನಿರ್ಮಾಣಗೊಂಡಿರುವ ಚತುಷ್ಪಥ ರಸ್ತೆಯ ಮೊದಲ ಹಂತದ ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕೆರೆ ಸಂಜೀವಿನಿ ಕಾರ್ಯಕ್ರಮಗಳ ಮೂಲಕವಾಗಿ ರಾಜ್ಯದ ಎಲ್ಲ ಕೆರೆಕಟ್ಟರಗಳನ್ನು ಸರಿಪಡಿಸುವ ಗುರಿಯನ್ನು ಇಟ್ಟುಕೊಂಡಿದ್ದು ಆಮೂಲಕ ಜಲ ಸಮೃದ್ದ ವಾದ ನಾಡನ್ನು ಕಟ್ಟುವ ಗುರಿಯನ್ನು ಹೊಂದಲಾಗಿದೆ ಎಂದರು.

ಸರಕಾರ ಈ ಬಾರಿಯ ಮುಂಗಡ ಪತ್ರದ ಮೂಲಕವಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡಿದೆ ಎಂದು ವಿವರಿಸಿದ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಸರಕಾರದ ಕಾರ್ಯಕ್ರಮಗಳಿಗೆ ಬೆಂಬಲವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದು ಮಾದರಿಯಾಗಿದೆ ಎಂದರು.

ಉಡುಪಿಯ ಪೇಜಾವರ ಶ್ರೀಗಳು ಆರ್ಶೀವಚನ ನೀಡಿ ಬಾಹುಬಲಿಯ ಮಹಾಮಸ್ತಕಾಭಿಷೇಕದೊಂದಿಗೆ ಪ್ರತಿಯೊಬ್ಬರಲ್ಲಿಯೂ ಜ್ಞಾನದ ಅಭಿಷೇಕವಾಗಲಿ ಇದರ ಮೂಲಕವಾಗಿ ಎಲ್ಲರ ಮನಸ್ಸುಗಳೂ ಜಾಗೃತವಾಗಿ ಧರ್ಮ ಭಕ್ತಿ, ಜ್ಞಾನದ ಸ್ಪೂರ್ತಿ ಸದಾ ಉಳಿಯಲಿ ಎಂದು  ಜೈನ ಧರ್ಮವು ವೈದಿಕ ಧರ್ಮಕ್ಕೆ ವಿಶೇಷ ಸ್ಪೂರ್ತಿ ಹಾಗೂ ಪ್ರೇರಣೆಯನ್ನು ನೀಡಿದೆ, ಬಾಹುಬಲಿಯ ಆದರ್ಶಗಳು ಎಲ್ಲರಲ್ಲಿಯೂ ಸುಜ್ಞಾನವನ್ನು ತುಂಬಲಿ ಎಂದು ಹಾರೈಸಿದರು.

ಕೇಂದ್ರ ಸರಕಾರದ ಸಾಂಖ್ಯಿಕ ಮತ್ತು ಅಂಕಿಅಂಶ ಖಾತೆಯ ಸಚಿವರಾದ ಡಿ.ವಿ ಸದಾನಂದ ಗೌಡ ಮಾತನಾಡಿ ನಮ್ಮ ಸಮಾಜದಲ್ಲಿ ಅಸಹನೆ ಅಶಾಂತಿ ಗಳು ತುಂಬುತ್ತಿದ್ದು ಅದಕ್ಕೆ ಪರಿಹಾರವಿರುವುದು ಧರ್ಮದಲ್ಲಿ ಮಾತ್ರ, ಜಗತ್ತಿಗೆ ಹೊಸ ಬೆಳಕನ್ನು ನೀಡುವ ಧರ್ಮಗಳನ್ನು ಭಾರತ ನೀಡಿದೆ ನಮ್ಮ ಎಲ್ಲ ಸಮಸ್ಯೆಗಳಿಗೂ ಅದರಲ್ಲಿ ಪರಿಹಾರವೂ ಇದೆ. ಜಗತ್ತಿನಲ್ಲಿ ಇಂದು ಹಿಂಸೆ ತುಂಬಿದ್ದು ಅಹಿಂಸೆಗೆ ಸ್ಥಾನವೇ ಇಲ್ಲವೆನ್ನುವ ಸ್ಥಿತಿಯಲ್ಲಿ ಮಹಾ ಮಸ್ತಕಾಭಿಷೇಕ ದಂತಹ ಕಾರ್ಯಕ್ರಮಗಳು ಅಹಿಂಸೆಯ ಅನಿವಾರ್ಯತೆಯನ್ನು ಮತ್ತೆ ನೆನಪಿಸುವಂತಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜನಕಲ್ಯಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕವಾಗಿ ಮಾದರಿಯಾಗಿದೆ ಎಂದರು.

ರಾಜ್ಯ ಸರಕಾರದ ಸಣ್ಣನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಅವರು ಕೆರೆ ಪುನಶ್ಚೇತನ ಯೋಜನೆಯ ಮೊದಲ ಹಂತದ ಅನುದಾನಗಳನ್ನು ವಿತರಿಸಿ ಮಾತನಾಡಿ ಈ ವರ್ಷ 28,5 ಕೋಟಿ ವೆಚ್ಚದಲ್ಲಿ 146 ಕೆರೆಗಳ ಅಭಿವೃದ್ದಿಯ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು  ಇದೀಗ ಮೊದಲ ಹಂತದ 87.5 ಲಕ್ಷ ಅನುದಾನವನ್ನು ವಿತರಿಸಲಾಗಿದೆ. ಕೆರೆಗಳು ಉಳಿದರೆ ರಾಜ್ಯದ ಕೃಷಿ ಹಾಗೂ ಕೃಷಿಕರು ಉಳಿಯಲು ಸಾಧ್ಯ ಈ ಹಿನ್ನಲೆಯಲ್ಲಿ ಕೆರಗಳ ಪುನಶ್ಚೇತನಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ ನಿರ್ವಹಣೆಯ ಜವಾಬ್ದಾರಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರಿಗೆ ವಹಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಮಾತನಾಡಿ ಧರ್ಮಸ್ಥಳವು ನಾಡಿಗೆ ಶಾಂತಿಯ ಸಂದೇಶವನ್ನು ನೀಡುತ್ತಿದೆ. ಮಹಾಮಸ್ತಕಾಭಿಷೇಕವು ಸಮಸ್ತಜನರಿಗೆ ಒಳಿತನ್ನು ಮಾಡಲಿ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಸರಕಾರದ ಸಹಕಾರಿ ಸಚಿವರಾದ ಬಂಡೆಪ್ಪಕಾಶೆಂಪುರ, ವಿಧಾನ ಪರಿಷತ್ ಸದಸ್ಯರುಗಳಾದ ಭೋಜೇಗೌಡ, ಕೆ ಹರೀಶ್ ಕುಮಾರ್, ಬಿಎಂ ಫಾರೂಕ್,  ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಸ್ವಾಮಿ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಕಾಂತರಾಜು, ಡಿ ಹರ್ಷೇಂದ್ರ ಕುಮಾರ್, ಡಿ ಸುರೇಂದ್ರ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸಂದರ್ಭ ಡಿ.ವಿ ಸದಾನಂದಗೌಡ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಲೋಕೋಪಯೋಗಿ ಇಲಾಖೆಯಿಂದ 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗಳ ಪ್ರಥಮ ಹಂತದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಮಹಾಮಸ್ತರಕಾಭಿಷೇಕದ ಅಂಗವಾಗಿ ಹೊರತರಲಾದ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು. ಕೆರೆ ಸಂಜೀವಿನಿ ಯೋಜನೆಯ ಅಡಿಯಲ್ಲಿ 34 ಕೆರಗಳ ಅಭಿವೃದ್ಧಿಗೆ 87.50 ಲಕ್ಷ ಅನುದಾನ ಹಾಗೂ ಹತ್ತು ಕೆರೆಗಳ ನಿರ್ವಹಣೆಗೆ ತಲಾ ಒಂದು ಲಕ್ಷ ಅನುದಾನವನ್ನು ವಿತರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ಸ್ವಾಗತಿಸಿದರು. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ. ಎಲ್ ಎಚ್ ಮಂಜುನಾಧ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News