ಬಜೆಟ್ ಕುರಿತ ಬಿಜೆಪಿಗರ ಟೀಕೆಯಲ್ಲಿ ಹುರುಳಿಲ್ಲ: ಸಚಿವ ಯು.ಟಿ.ಖಾದರ್

Update: 2019-02-09 15:31 GMT

ಮಂಗಳೂರು, ಫೆ.9: ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ 2019-20ನೆ ಸಾಲಿನ ರಾಜ್ಯ ಬಜೆಟ್ ಕುರಿತಾದ ದ.ಕ.ಜಿಲ್ಲಾ ಬಿಜೆಪಿ ಶಾಸಕರ ಟೀಕೆಯಲ್ಲಿ ಹುರುಳಿಲ್ಲ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಬಜೆಟ್‌ನಲ್ಲಿ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ಘೋಷಿಸಲಾಗಿದೆ. ಇನ್ನೂ ಬೇಡಿಕೆಗಳಿದ್ದರೆ ಜಿಲ್ಲೆಯ ಶಾಸಕರು ಸದನದ ಚರ್ಚೆಯಲ್ಲಿ ಪಾಲ್ಗೊಂಡು ಕೇಳಿ ಪಡೆಯಲಿ. ಅದು ಬಿಟ್ಟು ಸಾರ್ವಜನಿಕವಾಗಿ ಏನೂ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದರು.

ಬಿಜೆಪಿ ಶಾಸಕರು ಸದನದ ಚರ್ಚೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಯಾವ್ಯಾವ ಯೋಜನೆ ಬೇಕು ಎನ್ನುವ ಬೇಡಿಕೆಯ ಪಟ್ಟಿ ಸಲ್ಲಿಸಿದರೆ ಆ ಅಂಶಗಳನ್ನೂ ಬಜೆಟ್‌ ನಲ್ಲಿ ಸೇರಿಸಲಾಗುತ್ತದೆ. ಸದನದ ಚರ್ಚೆಯಲ್ಲಿ ಪಾಲ್ಗೊಳ್ಳದೆ ಕಾಲಹರಣ ಮಾಡಿದರೆ ಆಯಾ ಶಾಸಕರು ಪ್ರತಿನಿಧಿಸುವ ಜನತೆಗೆ ದ್ರೋಹ ಎಸಗಿದಂತಾಗು ತ್ತದೆ. ಜನರ ಕೆಲಸ ಮಾಡುವುದನ್ನು ಬಿಟ್ಟು ಈ ಶಾಸಕರೇನು ಸದನದ ಬಾವಿಯಲ್ಲಿ ಕೂರಲು ಹೋಗುವುದಾ ? ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯದ ಈ ಬಜೆಟ್ ಸರ್ವರಿಗೂ ಪಾಲು ನೀಡಿದೆ. ಭತ್ತ ಬೆಳೆ ಉತ್ತೇಜನಕ್ಕೆ ಕರಾವಳಿಗೆ 5 ಕೋ.ರೂ. ಪ್ಯಾಕೇಜ್ ಘೋಷಿಸಿದ್ದು, ಇದನ್ನು ಸಂಬಂಧಿಸಿದ ಇಲಾಖೆಯ ಮೂಲಕ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು. ಎರಡು ಬೀಚ್ ಅಭಿವೃದ್ಧಿಗೆ 7 ಕೋ.ರೂ. ಅನುದಾನದ ದೊರೆತಿದೆ, ಮುಂದೆ ಇತರ ಬೀಚ್‌ಗಳ ಅಭಿವೃದ್ಧಿಗೂ ಅನುದಾನ ಸಿಗಲಿದೆ. ಮಂಗಳೂರಿನಲ್ಲಿ ಐದಾರು ವರ್ಷ ನಂತರವಾದರೂ ಮೆಟ್ರೋ ರೈಲು ಯೋಜನೆ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಅಡಿಪಾಯ ಹಾಕಲಾಗಿದೆ. ಮೀನುಗಾರರಿಗೂ ಸೌಲಭ್ಯ ಒದಗಿಸಲಾಗಿದೆ ಎಂದು ಸಚಿವ ಖಾದರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾರ್ಪೊರೇಟರ್ ಎ.ಸಿ. ವಿನಯರಾಜ್, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿಗೆ ಜನರಿಗಿಂತ ರಾಜಕೀಯ ಮುಖ್ಯ: ಬಜೆಟ್ ಮಂಡನೆ ಸಮಯದಲ್ಲಿ ಗದ್ದಲ ಸೃಷ್ಟಿಸಿದ ಬಿಜೆಪಿಗರಿಗೆ ಜನರ ಹಿತಾಸಕ್ತಿಗಿಂತ ರಾಜಕೀಯವೇ ಮುಖ್ಯವಾಗಿದೆ. ರಾಜ್ಯದ ಜನರ ಭವಿಷ್ಯ ನಿರ್ಧರಿಸುವ ಯೋಜನೆಗಳ ಬಗ್ಗೆ ಚರ್ಚೆ ನಡೆಸುವ ಬದಲು ಅವರಿಗೆ ಪಕ್ಷವೇ ದೊಡ್ಡದಾಗಿದೆ. ಈ ರೀತಿ ನಡೆದುಕೊಳ್ಳುವುದು ಸದನದ ಘನತೆಗೆ ಕಪ್ಪು ಚುಕ್ಕೆ ಎಂದು ಆಕ್ಷೇಪಿಸಿದ ಸಚಿವ ಖಾದರ್ ರಾಜ್ಯ ಸರಕಾರ ಪ್ರತಿಪಕ್ಷದ ಕೃಪಾಕಟಾಕ್ಷದಲ್ಲಿಲ್ಲ. ಇದುವರೆಗೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿದೆ. ಆದರೆ ಅದು ಸರಕಾರದ ದೌರ್ಬಲ್ಯ ಎಂದು ಭಾವಿಸಬೇಕಾಗಿಲ್ಲ. ಸರಕಾರ ಬಜೆಟ್ ಅಂಗೀಕಾರ ಪಡೆದು ಯೋಜನೆಗಳ ಅನುಷ್ಠಾನ ಮಾಡಲಿದೆ ಎಂದರು.

ಬಿಜೆಪಿ ಆಡಿಯೊ: ಜೆಡಿಎಸ್ ಶಾಸಕರಿಗೆ ಬಿಜೆಪಿ ಆಮಿಷವೊಡ್ಡಿದ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೊ ಟೇಪ್ ಕುರಿತು ಪ್ರತಿಕ್ರಿಯಿಸಿದ ಸಚಿವ ಖಾದರ್, ಮುಖ್ಯಮಂತ್ರಿ ಆಧಾರ ಇಟ್ಟುಕೊಂಡೇ ಹೇಳಿದ್ದಾರೆ. ತಪ್ಪು ಮಾಡಿದವರು ತಾನೇ ಮಾಡಿದ್ದು ಎಂದು ಒಪ್ಪಿಕೊಳ್ತಾರಾ ಎಂದು ಪರೋಕ್ಷವಾಗಿ ಯಡಿಯೂರಪ್ಪರಿಗೆ ಟಾಂಗ್ ನೀಡಿದರು.

ಆಡಿಯೊ ಟೇಪ್ ಕೇಳುವಾಗ ಯಾರು ಮಾತನಾಡಿದ್ದು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಕುರಿತ ತನಿಖೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧೀನದ ತನಿಖಾ ಸಂಸ್ಥೆ ಮೂಲಕವೇ ತನಿಖೆ ಮಾಡಿಸಲಿ. ಆಗ ಜನರಿಗೆ ಸತ್ಯ ವಿಚಾರ ತಿಳಿಯಲಿದೆ ಎಂದರು.

ಮಂಗಳೂರಿನ ಕೆಲವು ಕಡೆ ರಾಜಕಾಲುವೆ ದುರಸ್ತಿಯಾಗಿಲ್ಲ. ಕೆಲವೆಡೆ ಒತ್ತುವರಿಯೂ ಆಗಿದೆ. ಅದಕ್ಕಾಗಿ ರಾಜಕಾಲುವೆಯ ಆರಂಭದಿಂದ ಅಂತ್ಯದವರೆಗೆ ಮರುರಚನೆ ಯೋಜನೆ ಪ್ರಸ್ತಾಪಿಸಲಾಗಿದ್ದು, ಅದಕ್ಕೆ ಮುಖ್ಯಮಂತ್ರಿಯೂ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News