ಕೋಟ ಜೋಡಿ ಕೊಲೆ ಪ್ರಕರಣ ತನಿಖೆ: ಪೋಲೀಸರ ಕ್ರಮಕ್ಕೆ ಸಿಪಿಎಂ ಶ್ಲಾಘನೆ
Update: 2019-02-09 20:43 IST
ಉಡುಪಿ, ಫೆ.9: ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರ ಕೊಲೆ ಪ್ರಕರಣದಲ್ಲಿ ತುರ್ತುಕ್ರಮ ವಹಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಶ್ಲಾಘಿಸಿದೆ.
ಇಬ್ಬರು ಯುವಕರ ಕೊಲೆಯ ಹಿಂದೆ ಕೇವಲ ಜಾಗದ ಜಗಳವಲ್ಲದೆ ಪ್ರಭಾವಿ ವ್ಯಕ್ತಿಗಳ ಪಾತ್ರವು ಇದೆ ಎಂಬುದು ಈಗ ಖಚಿತವಾಗಿದೆ. ಬಂಧಿತರಲ್ಲಿ ಬಿಜೆಪಿಗೆ ಸೇರಿದ ಜಿಪಂ ಸದಸ್ಯರೂ ಸೇರಿರುವುದು ಇದಕ್ಕೆ ಪುಷ್ಟಿ ನೀಡಿದೆ. ಭಿನ್ನ ರಾಜಕೀಯ ಅಭಿಪ್ರಾಯ ಹೊಂದಿರುವವರನ್ನು ‘ಮುಗಿಸುವ’ ಹಾಗೂ ಇತರರಲ್ಲಿ ಭೀತಿ ಹುಟ್ಟಿಸುವ ಷಡ್ಯಂತ್ರ ಇದರಲ್ಲಿ ಅಡಗಿದೆ ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ.
ದನ ಸತ್ತರೆ ಪ್ರತಿಭಟನೆ ನಡೆಸುವ ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ ಎಂದು ಹೇಳಿಕೆಯಲ್ಲಿ ಪ್ರಶ್ನಿಸಿದ ಸಿಪಿಎಂ, ಆರೋಪಿ ರಾಘವೇಂದ್ರ ಕಾಂಚನ್ ಜಿಪಂ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಬೇಂದು ಆಗ್ರಹಿಸಿದೆ.