ಉಡುಪಿ: ಜಿಲ್ಲೆಯಲ್ಲಿ ‘ಬೆಹತರ್ ಭಾರತ್’ ಅಭಿಯಾನಕ್ಕೆ ಚಾಲನೆ
ಉಡುಪಿ, ಫೆ.9: ವಿದ್ಯಾರ್ಥಿ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ‘ಬೆಹತರ್ ಭಾರತ್’ (ಉತ್ತಮ ಭಾರತ) ಎಂಬ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಉಡುಪಿ ಜಿಲ್ಲೆಯಲ್ಲಿ ಎನ್‌ಎಸ್‌ಯುಐ ವತಿಯಿಂದ ಅಭಿಯಾನಕ್ಕೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.
ಈ ಸಂಬಂಧ ಪೋಸ್ಟರ್ ಬಿಡುಗಡೆ ಮಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ದನ ತೋನ್ಸೆ, ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಿರುವ ವಿಚಾರಗಳನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಮು ದಾಯ ದಿಂದ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲೂ ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕವಾದ ಎನ್‌ಎಸ್ ಯುಐ ಮೂಲಕ ಕಾಲೇಜುಗಳ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಕ್ಕೆ ಕಾಂಗ್ರೆಸ್ ಉದ್ದೇಶಿಸಿದೆ ಎಂದವರು ನುಡಿದರು.
ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಕ್ರಿಸ್ಟನ್ ಆಲ್ಮೇಡಾ ಮಾತನಾಡಿ, ‘ಬೆಹತರ್ ಭಾರತ್’ ಕಲ್ಪನೆಯು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕನಸಾಗಿದ್ದು, ವಿದ್ಯಾರ್ಥಿಗಳೇ ನಿಜವಾದ ರಾಷ್ಟ್ರ ನಿರ್ಮಾತೃಗಳು. ವಿಜ್ಞಾನ, ತಂತ್ರಜ್ಞಾನ, ಕಲೆ ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿ ದೇಶ ಮುನ್ನಡೆ ಯಬೇಕೆ ಹೊರತು ಯುದ್ಧದತ್ತ ಅಲ್ಲ. ವಿಚಾರವಾದ ಹಾಗೂ ನ್ಯಾಯವನ್ನು ಅಪ್ಪಿಕೊಳ್ಳುವ ಮೂಲಕ ಸಮಾಜ ಮುಂದುವರಿಯುತ್ತದೆ. ಭಾರತದ ವಿದ್ಯಾರ್ಥಿಗಳು ಈ ಪ್ರಗತಿಪರ ಮುನ್ನಡೆಯ ಮುಂಚೂಣಿಯಲ್ಲಿದ್ದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ದುಬಾರಿ ಶುಲ್ಕ ಹಾಗೂ ಸೀಮಿತ ಸೀಟುಗಳಿಗೆ ಕಠಿಣ ಸ್ಪರ್ಧೆ ಕುರಿತ ಕಳವಳ, ಮುಂಬರುವ ಲೋಕಸಭಾ ಚುನಾವಣೆಗೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಚುನಾವಣಾ ಪ್ರಣಾಳಿಕ ಯಾವ ರೀತಿಯಲ್ಲಿ ಆದ್ಯತೆ ನೀಡಬೇಕು ಎಂಬ ಕುರಿತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸು ವುದಕ್ಕಾಗಿ ಕಾಂಗ್ರೆಸ್ ಪಕ್ಷ ‘ಬೆಹತರ್ ಭಾರತ್’ ಅಭಿಯಾನ ಪ್ರಾರಂಭಿಸಿದೆ ಎಂದವರು ತಿಳಿಸಿದರು.
ಎನ್‌ಎಸ್‌ಯುಐ ಕೋಟ ಬ್ಲಾಕ್ ಅಧ್ಯಕ್ಷ ಗಣೇಶ್, ಪದಾಧಿಕಾರಿಗಳಾದ ದೀಕ್ಷೀತ್, ಹರ್ಶಿತ್, ದೇವದಾಸ್ ಹಾಗೂ ಇತರರು ಉಪಸ್ಥಿತರಿದ್ದರು.