ಕೊಯಮತ್ತೂರು ಫಾರ್ಮುಲಾ ಕಾರ್ ಸ್ಪರ್ಧೆಯಲ್ಲಿ ಮಿಂಚಿದ ಎಂಐಟಿ ತಂಡ

Update: 2019-02-09 15:17 GMT

ಮಣಿಪಾಲ, ಫೆ.9: ತಮಿಳುನಾಡು ಕೊಯಮತ್ತೂರಿನ ಕಾರಿ ಮೋಟಾರ್ ಸ್ಪೀಡ್‌ವೇಯಲ್ಲಿ ನಡೆದ ‘ಫಾರ್ಮುಲಾ ಭಾರತ್’ ಫಾರ್ಮುಲಾ ಕಾರಿನ ಇಂಜಿನಿಯರಿಂಗ್ ವಿನ್ಯಾಸ ಸ್ಪರ್ಧೆಯಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಫಾರ್ಮುಲಾ ಮಣಿಪಾಲ ತಂಡ ತಾವೇ ವಿನ್ಯಾಸ ಗೊಳಿಸಿದ ‘ಎಫ್‌ಎಂಎಕಲ್8’ ಕಾರಿನೊಂದಿಗೆ ಉತ್ತಮ ಪ್ರದರ್ಶನ ನೀಡಿದೆ.

ಅಲ್ಲದೇ ಈ ಬಾರಿ ಮೊದಲ ಸಲ ಇಲೆಕ್ಟ್ರಿಕ್ ವಾಹನಗಳಿಗಾಗಿ ನಡೆದ ಸ್ಪರ್ಧೆಯಲ್ಲೂ ಎಂಐಟಿ ತಂಡ ತಮ್ಮ ಇಲೆಕ್ಟ್ರಿಕ್ ವಾಹನ ‘ಎಫ್‌ಎಂಎಕ್ಸ್8ಇ’ ಯೊಂದಿಗೆ ಸ್ಪರ್ಧಿಸಿತ್ತು ಎಂದು ಎಂಐಟಿ ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೊಂಡಾ ಸಿಬಿಆರ್ 600 ಮಿಷನ್‌ನ ಫಾರ್ಮುಲಾ ಮಣಿಪಾಲದ ದಹನ ಕಾರು ಕೇವಲ 210 ಕಿಲೋಗ್ರಾಂ ತೂಗುತ್ತಿದ್ದು, 74 ತಂಡಗಳ ಸ್ಪರ್ಧಾಕಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟಾರೆಯಾಗಿ ಮೂರನೇ ಸ್ಥಾನದೊಂದಿಗೆ ಸ್ಪರ್ಧೆಯನ್ನು ಮುಗಿಸಿತು.

ಇಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಮೊದಲ ಬಾರಿ ಸ್ಪರ್ಧಿಸಿದ ಮಣಿಪಾಲ ತಂಡ ವಿನ್ಯಾಸ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರೆ, ಒಟ್ಟಾರೆಯಾಗಿ ಮೂರನೇ ಸ್ಥಾನ ಪಡೆಯಿತು. ಈ ಕಾರು 105 ಹಾರ್ಸ್‌ಪವರ್‌ನ ಮೋಟಾರು ಹಾಗೂ 7.5ಕಿಲೋವ್ಯಾಟ್‌ನ ಬ್ಯಾಟರಿ ಹೊಂದಿದ್ದು ಕೇವಲ 195 ಕೆ.ಜಿ.ಭಾರವಿತ್ತು. ಎಂಐಟಿಯ 50 ವಿದ್ಯಾರ್ಥಿಗಳ ತಂಡ, ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಈ ಕಾರನ್ನು ವಿನ್ಯಾಸಗೊಳಿಸಿ, ನಿರ್ಮಿಸಿತ್ತು.

ಎಂಐಟಿ ತಂಡದ ನಾಯಕ ಶಿವಂ ಗುಪ್ತಾ ತಂಡದ ಪ್ರದರ್ಶನದ ಕುರಿತು ಮಾತನಾಡಿ, ಇಲೆಕ್ಟ್ರಿಕ್ ಕಾರಿನ ಕೆಲಸ ಪ್ರಾರಂಭಗೊಂಡಿದ್ದು 2016ರಲ್ಲಿ. ಇದರೊಂದಿಗೆ ಮೊದಲ ಬಾರಿ ಸ್ಪರ್ಧಿಸಿದ್ದೇವೆ. ಇದರಲ್ಲಿ ಕಾರಿನ ವಿನ್ಯಾಸಕ್ಕೆ ರಾಷ್ಟ್ರಮಟ್ಟದಲ್ಲಿ ಎರಡನೇ ಬಹುಮಾನ ಪಡೆದ ತೃಪ್ತಿ ನಮಗಿದೆ ಎಂದರು.

ರಿತ್ವಿಕ್ ಶ್ರೀನಿವಾಸ್ ತಂಡದ ಮ್ಯಾನೇಜರ್ ಆಗಿದ್ದರೆ, ಡಾ.ದಯಾನಂದ ಪೈ ಫಾರ್ಮುಲಾ ಕಾರಿಗೆ ಹಾಗೂ ಪ್ರಮೋದ್ ಅಂತೋನಿ ಇಲೆಕ್ಟ್ರಿಕ್ ಕಾರಿಗೆ ಪ್ರಾಧ್ಯಾಪಕ ಸಲಹೆಗಾರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News