ಚಿಕಿತ್ಸೆ ನಂತರ ಸ್ವದೇಶಕ್ಕೆ ಮರಳಿದ ಅರುಣ್ ಜೇಟ್ಲಿ

Update: 2019-02-09 15:19 GMT

ಹೊಸದಿಲ್ಲಿ, ಫೆ.9: ಅನಾರೋಗ್ಯದ ಕಾರಣದಿಂದ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ಜೇಟ್ಲಿ ಅಮೆರಿಕದಲ್ಲಿದ್ದ ಕಾರಣ ಈ ವರ್ಷದ ಮಧ್ಯಂತರ ಬಜೆಟ್ ಮಂಡನೆಯ ವೇಳೆ ಹಾಜರಿರಲು ಸಾಧ್ಯವಾಗಿರಲಿಲ್ಲ. ಅವರ ಬದಲಾಗಿ ಕೇಂದ್ರ ರೈಲ್ವೇ ಮತ್ತು ಕಲ್ಲಿದ್ದಲು ಸಚಿವ ಪಿಯೂಶ್ ಗೋಯಲ್ ಮಧ್ಯಂತರ ಬಜೆಟ್ ಮಂಡಿಸಿದ್ದರು.

ಒಂದು ತಿಂಗಳ ಕಾಲ ಅಮೆರಿಕದಲ್ಲಿ ಚಿಕಿತ್ಸೆ ಪಡೆದ ನಂತರ ಮರಳುತ್ತಿರುವ ಜೇಟ್ಲಿ ಈ ಕುರಿತು ಟ್ವಿಟರ್‌ನಲ್ಲಿ ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದು, ಮರಳಿ ಮನೆಗೆ ಬಲು ಸಂತಸವಾಗುತ್ತಿದೆ ಎಂದು ಬರೆದಿದ್ದಾರೆ. 66ರ ಹರೆಯದ ಜೇಟ್ಲಿ ಅನಾರೋಗ್ಯದ ಸಮಸ್ಯೆಯಿಂದ ಕಳೆದ ವರ್ಷ ಎಪ್ರಿಲ್‌ನಲ್ಲಿ ಕಚೇರಿಗೆ ಬರುವುದನ್ನು ನಿಲ್ಲಿಸಿದ್ದರು. ತಿಂಗಳ ನಂತರ ಅವರನ್ನು ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಗೆ ದಾಖಲಿಸಲಾಗಿತ್ತು. ಆಗಸ್ಟ್‌ನಲ್ಲಿ ಅವರು ಮತ್ತೆ ಕಚೇರಿಗೆ ಮರಳಿದರೂ ಜನವರಿಯಲ್ಲಿ ಆರೋಗ್ಯ ಬಿಗಡಾಯಿಸಿದ ಕಾರಣ ಪುನಃ ಅಮೆರಿಕಕ್ಕೆ ಚಿಕಿತ್ಸೆಗೆ ತೆರಳಿದ್ದರು.

ಅಮೆರಿಕದಲ್ಲಿ ಚಿಕಿತ್ಸೆ ಪಡೆಯುವ ಮಧ್ಯೆಯೂ ಜೇಟ್ಲಿ ಭಾರತದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಮತ್ತು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News