ಉಡುಪಿ: ಆಂಗ್ಲ ಮಾಧ್ಯಮ ಶಾಲೆ ಸ್ಥಾಪನೆ ವಿರೋಧಿಸಿ ಸಿಪಿಎಂ ಧರಣಿ

Update: 2019-02-09 15:20 GMT

ಮಣಿಪಾಲ, ಫೆ.9: ರಾಜ್ಯ ಸರಕಾರ ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದನ್ನು ವಿರೋಧಿಸಿ ಸಿಪಿಎಂ ಉಡುಪಿ ಜಿಲ್ಲಾ ಸಮಿತಿಯು ಫೆ.8ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.

ಬಳಿಕ ಈ ಕುರಿತು ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ ಸಲ್ಲಿಸಲಾಯಿತು. ಮನವಿಯನ್ನು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವೀಕರಿಸಿದರು. ತೀವ್ರ ವಿರೋಧದ ಮಧ್ಯೆಯೂ ಸರಕಾರ ರಾಜ್ಯ ಪಾಲರ ಭಾಷಣದ ಮೂಲಕ ಮುಂಬರುವ ದಿನಗಳಲ್ಲಿ ಪ್ರಾಥಮಿಕ ಹಂತದಲ್ಲಿ 1000 ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಕುರಿತ ತನ್ನ ಬದ್ಧತೆ ಯನ್ನು ವ್ಯಕ್ತಪಡಿಸಿರುವುದು ಖಂಡನೀಯ. ಕೂಡಲೇ ಈ ಜನವಿರೋಧಿ ನಿಲುವನ್ನು ಕೈ ಬಿಡಬೇಕೆಂದು ಸಿಪಿಎಂ ಮನವಿಯಲ್ಲಿ ಒತ್ತಾಯಿಸಿದೆ.

ಕನ್ನಡ ಮಾಧ್ಯಮದ ಹೆಸರಿನಲ್ಲಿ ಪರವಾನಿಗೆ ಪಡೆದು ಇಂಗ್ಲೀಷ್ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಿ ಜನತೆಯನ್ನು ಲೂಟಿ ಮಾಡುತ್ತಿರುವ ಖಾಸಗಿ ಶಾಲೆ ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಇವುಗಳನ್ನು ತಡೆಲು ರಾಜ್ಯ ಸರಕಾರ ವಿಫಲವಾಗಿದೆ. ಅಲ್ಲದೆ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವಂತೆ ಕ್ರಮವಹಿ ಸುವಲ್ಲಿಯೂ ಸರಕಾರ ಎಡವಿದೆ. ಈ ಕಾರಣದಿಂದ ಕನ್ನಡ ಶಾಲೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಮುಚ್ಚಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಸರಕಾರದ ಈ ನಡೆ ಭಾಷಾವಾರು ರಚನೆಯ ಉದ್ದೇಶಕ್ಕೆ ಕೂಡಾ ತದ್ವಿರುದ್ಧ ವಾಗಿದೆ. ಕನ್ನಡದ ರಾಷ್ಟ್ರೀಯತೆಯನ್ನು ಉಳಿಸಿ, ಬೆಳೆಸಬೇಕಾದ ರಾಜ್ಯ ಸರಕಾರವೇ ಇಂತಹ ಕ್ರಮಗಳ ಮೂಲಕ ಅದರ ಮೇಲಿನ ದಾಳಿಗೆ ಕಾರಣವಾಗುತ್ತಿರುವುದು ಸರಿಯಲ್ಲ. ಸರಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಸಿಪಿಎಂ ಮನವಿಯಲ್ಲಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ, ಉಡುಪಿ ಕಾರ್ಯದರ್ಶಿ ಶಶಿಧರ್ ಗೊಲ್ಲ, ವಿಠಲ ಪೂಜಾರಿ, ಮಹಾಬಲ ವಡೇರಹೋಬಳಿ, ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News