×
Ad

ಕೋಟ ಮಣೂರು ಜೋಡಿ ಕೊಲೆ ಪ್ರಕರಣ: ಆರೋಪಿಗಳ ತೀವ್ರ ವಿಚಾರಣೆ: ಎರಡು ಬೈಕ್‌ಗಳು ವಶ

Update: 2019-02-09 21:24 IST

ಉಡುಪಿ, ಫೆ. 8: ಶೌಚಾಲಯ ಹೊಂಡದ ವಿಚಾರದಲ್ಲಿ ಜ.26ರಂದು ನಡೆದ ಮಣೂರು ಗ್ರಾಮದ ಚಿಕ್ಕನಕೆರೆ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ಇಂದು ಮಹಜರು ಪ್ರಕ್ರಿಯೆ ನಡೆಸಿ, ಕೃತ್ಯಕ್ಕೆ ಬಳಸಿದ ತಲವಾರು, ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ತನಿಖಾಧಿಕಾರಿಯಾಗಿರುವ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದ ಪೊಲೀಸ್ ತಂಡವು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿ ಸಿದ್ದು, ಈ ಬಗ್ಗೆ ಆರೋಪಿಗಳು ನೀಡಿದ ಮಾಹಿತಿಯಂತೆ ಪೊಲೀಸರು ಮಣೂರು ಗ್ರಾಮದಲ್ಲಿರುವ ರಾಜಶೇಖರ್ ರೆಡ್ಡಿಯ ಮನೆ ಹಾಗೂ ವಿವಿಧ ಸ್ಥಳಗಳಿಗೆ ಆರೋಪಿಗಳೊಂದಿಗೆ ತೆರಳಿ ಮಹಜರು ನಡೆಸಿ ಮಹತ್ವದ ಸಾಕ್ಷ ಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಕೃತ್ಯಕ್ಕೆ ಬಳಸಿದ ತಲವಾರುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಇಂದು ಬೀಜಾಡಿ ಸಮೀಪದ ಮೂಡುಗೋಪಾಡಿ ಎಂಬಲ್ಲಿರುವ ಆರೋಪಿ ಮೆಡಿಕಲ್ ರವಿ ಮಾಲಕತ್ವದ ಗೋಲ್ಡನ್ ಚಾಯ್ಸ್ ತಂಪು ಪಾನೀಯ ಫ್ಯಾಕ್ಟರಿಗೆ ಆರೋಪಿಯೊಂದಿಗೆ ತೆರಳಿ ಮಹಜರು ನಡೆಸಿದ್ದಾರೆ.

ಕೊಲೆ ಎಸಗಿದ ಬಳಿಕ ಮೂವರು ಆರೋಪಿಗಳು ರಾಜಶೇಖರ ರೆಡ್ಡಿ ಜೊತೆ ಎರಡು ಬೈಕ್‌ಗಳಲ್ಲಿ ಈ ಫ್ಯಾಕ್ಟರಿಗೆ ಬಂದಿದ್ದು, ನಂತರ ಆ ಎರಡು ಬೈಕ್‌ಗಳನ್ನು ಫ್ಯಾಕ್ಟರಿಯಲ್ಲಿಟ್ಟು ಕಾರಿನಲ್ಲಿ ಪರಾರಿಯಾಗಿದ್ದರು. ಅದರಂತೆ ಪೊಲೀಸ್ ತಂಡ ಇಲ್ಲಿಗೆ ಆಗಮಿಸಿ ಕೃತ್ಯಕ್ಕೆ ಬಳಸಿದ ಎರಡು ಬೈಕ್‌ಗಳನ್ನು ವಶಪಡಿಸಿ ಕೊಂಡಿದೆ. ಅದೇ ರೀತಿ ಕೃತ್ಯಕ್ಕೆ ಬಳಸಿದ ಕಾರುಗಳಿಗಾಗಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳ ವಿಚಾರಣೆ ಹಾಗೂ ಮಹಜರು ಪ್ರಕ್ರಿಯೆ ಮುಂದುವರಿಯಲಿದ್ದು, ಕೃತ್ಯಕ್ಕೆ ಬಳಸಿದ ಹಲವು ಸೊತ್ತುಗಳು ಹಾಗೂ ಸಾಕ್ಷ ಗಳನ್ನು ಸಂಗ್ರಹಿಸ ಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ರಾಘವೇಂದ್ರ ಕಾಂಚನ್, ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News