ಜಯಲಲಿತಾರ ಚಿಕಿತ್ಸೆಯ ಪರಿಶೀಲನೆ ವಿರುದ್ಧ ಅಪೋಲೊ ಆಸ್ಪತ್ರೆ ಮೇಲ್ಮನವಿ

Update: 2019-02-09 16:48 GMT

ಚೆನ್ನೈ,ಫೆ.9: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರ ಸಾವಿನ ತನಿಖೆ ನಡೆಸುತ್ತಿರುವ ತನಿಖಾ ಆಯೋಗ, ಮಾಜಿ ಮುಖ್ಯಮಂತ್ರಿಗೆ ಆಸ್ಪತ್ರೆಯಲ್ಲಿ ನೀಡಲಾಗಿರುವ ಚಿಕಿತ್ಸೆಯನ್ನು ಪರಿಶೀಲಿಸುವ ಮೇಲೆ ನಿರ್ಬಂಧ ಹೇರಬೇಕೆಂದು ಕೋರಿ ಅಪೋಲೊ ಆಸ್ಪತೆ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ.

ತನಿಖಾ ಆಯೋಗವು ಆಸ್ಪತ್ರೆಯ ಬಗ್ಗೆ ಪೂರ್ವಾಗ್ರಹವನ್ನು ಹೊಂದಿದೆ ಎಂದು ಅಪೋಲೊ ಆಸ್ಪತ್ರೆಯ ಅಧಿಕಾರಿಗಳು ಆರೋಪಿಸಿದ್ದಾರೆ. ನ್ಯಾಯಾಧೀಶ ಎ. ಆರ್ಮುಗಸ್ವಾಮಿ ನೇತೃತ್ವದ ತನಿಖಾ ಆಯೋಗದ ವಿಚಾರಣಾ ವ್ಯಾಪ್ತಿಗೆ ತಮಿಳುನಾಡಿನ ಮಾಜಿ ನಾಯಕಿಗೆ ನೀಡಲಾದ ಚಿಕಿತ್ಸೆಯನ್ನು ತರುವ ಸರಕಾರದ ಆದೇಶವನ್ನು ರದ್ದುಗೊಳಿಸುವಂತೆ ಆಸ್ಪತ್ರೆ ನ್ಯಾಯಾಲಯಕ್ಕೆ ಮನವಿ ಮಾಡಿದೆ. ತಮಿಳು ನಾಡಿನ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಅಪೋಲೊ ಆಸ್ಪತ್ರೆ ಅಧಿಕಾರಿಗಳ ಜೊತೆ ಸೇರಿ ಹುನ್ನಾರ ನಡೆಸಿ ಜಯಲಲಿತಾರಿಗೆ ಅಸಮಂಜಸ ಚಿಕಿತ್ಸೆಯನ್ನು ನೀಡಿದ್ದಾರೆ ಎಂದು ತನಿಖಾ ಆಯೋಗದ ವಕೀಲರು ದೂರು ಸಲ್ಲಿಸಿದ ತಿಂಗಳುಗಳ ನಂತರ ಆಸ್ಪತ್ರೆ ಮೇಲ್ಮನವಿಯನ್ನು ಸಲ್ಲಿಸಿದೆ.

ಆರೋಪದ ಹಿನ್ನೆಲೆಯಲ್ಲಿ ಜಯಲಲಿತಾರಿಗೆ ನೀಡಿದ ಚಿಕಿತ್ಸೆಯ ಸಮರ್ಪಕವೇ ಅಲ್ಲವೇ ಎಂಬುದನ್ನು ತನಿಖಾ ಆಯೋಗವು ಪರಿಶೀಲಿಸುವುದರ ಮೇಲೆ ನಿರ್ಬಂಧ ಹೇರುವಂತೆ ಆಸ್ಪತ್ರೆ ಮನವಿ ಮಾಡಿದೆ. ತನಿಖಾ ಆಯೋಗವು ನಿಜಾಂಶ ಪತ್ತೆ ಮಾಡುವ ಸಂಸ್ಥೆಯಾಗಿದ್ದು ಆರೋಪ ಮಾಡುವ ಹಕ್ಕು ಅದಕ್ಕಿಲ್ಲ ಎಂದು ಅಪೋಲೊ ಆಸ್ಪತ್ರೆ ತನ್ನ ಮನವಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News