ಮಾಲಿನ್ಯ ರಹಿತ ಸೋಲಾರ್ ಹೈಬ್ರಿಡ್ ಸಿಸ್ಟಂ: ಮೂಡುಬಿದಿರೆಯ ಡೆನಿಮ್ ಧೀರಜ್‍ನಿಂದ ಅನ್ವೇಷಣೆ
ಮೂಡುಬಿದಿರೆ, ಫೆ. 9: ಜರ್ಮನಿಯ ಟೆಕ್ನಿಕಲ್ ಯುನಿವರ್ಸಿಟಿ ಆಫ್ ಮ್ಯೂನಿಕ್ (ಟುಮ್ ವಿ.ವಿ.)ಯಲ್ಲಿ ಪವರ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿರುವ ಮೂಡುಬಿದಿರೆ ಮೂಲದ ಡೆನಿಮ್ ಡಿ'ಕೋಸ್ತ ಮಾಲಿನ್ಯರಹಿತ ರಿನ್ಯೂವೆಬಲ್ ಸೋಲಾರ್ ಹೈಬ್ರಿಡ್ ವ್ಯವಸ್ಥೆಯನ್ನು ಅನ್ವೇಷಣೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಅವರ ಸಾಧನೆ ಜರ್ಮನಿಯ ಬವೇರಿಯನ್ ಸೋಲಾರ್ ಎನರ್ಜಿ ಎಸೋಸಿಯೇಶನ್ ನೀಡಿರುವ `ಅತ್ಯುತ್ತಮ ಮಾಸ್ಟರ್ ಥಿಸೀಸ್ ಅವಾರ್ಡ್ ನೀಡಿ ಗೌರವಿಸಿದೆ. ಸುಮಾರು ರೂ. 1.20 ಲಕ್ಷ ಗೌರವ ಧನ ಪ್ರಶಸ್ತಿಯೊಂದಿಗೆ ಲಭಿಸಿದೆ.
ವಿಶ್ವಸಂಸ್ಥೆಯ ಯುನೈಟೆಡ್ ನೇಶನ್ಸ್ ವಲ್ಡ್ ಫುಡ್ ಪ್ರೋಗ್ರಾಮ್ ಸಹಕಾರದೊಂದಿಗೆ ದಿ ಚೇರ್ ಆಫ್ ಎನರ್ಜಿ ಎಕಾನಮಿ ಆ್ಯಂಡ್ ಅಪ್ಲಿಕೇಶನ್ ಟೆಕ್ನಾಲಜಿ ಯಲ್ಲಿ ಡೆನಿಮ್ ತನ್ನ ಸಂಶೋಧನೆಯನ್ನು ನಡೆಸಿದ್ದು, ಈ ವ್ಯವಸ್ಥೆಯಿಂದಾಗಿ ಶೇ.40ರಷ್ಟು ನಿರ್ವಹಣ ವೆಚ್ಚದಲ್ಲಿ ಕಡಿತ, ಶೇ. 85ರಷ್ಟು ಮಾಲಿನ್ಯರಹಿತ ರಿನ್ಯೂವೆಬಲ್ ಸೋಲಾರ್ ಹೈಬ್ರಿಡ್ ವ್ಯವಸ್ಥೆಯನ್ನು ರೂಪಿಸಿದ್ದಾರೆ. ವಿವಿಧ ದೇಶಗಳ 300ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ಸೌಲಭ್ಯ ಪಡೆಯಲು ಅಸಾಧ್ಯಗುವಾಗಿದ್ದು, ಅಂತಹ ಪ್ರದೇಶಗಳಲ್ಲಿ ಡೆನಿಮ್ ಸೋಲಾರ್ ವ್ಯವಸ್ಥೆಯನ್ನು ಕಲ್ಪಿಸಲು ವಿಶ್ವಸಂಸ್ಥೆಯ ಅವಕಾಶ ಕಲ್ಪಿಸಿದೆ.
ಪ್ರೋರ್ಟೆಬಲ್ ಸೋಲಾರ್:
ಸೋಲಾರ್ ಹೈಬ್ರಿಡ್ ವ್ಯವಸ್ಥೆ, ಬೇಕಾದಲ್ಲಿಗೆ ಕೊಂಡೊಯ್ಯಬಹುದಾದ ಪ್ರೋರ್ಟೆಬಲ್ ಸೋಲಾರ್ ಘಟಕವನ್ನು ಕಲ್ಪಿಸಿದರು. ಮನೆಯ ವಿದ್ಯುತ್ ಉಪಕರಣ ಗಳಲ್ಲದೆ, ಹೆಚ್ಚು ಸಾಮರ್ಥ್ಯ ಬ್ಯಾಟರಿ ಅಳವಡಿಸಿದರೆ ಪಂಪ್‍ಸೆಟ್ ಅನ್ನು ಕೂಡ ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ.
29 ಹರೆಯ ಡೆನಿಮ್ ಅವರ ಫ್ರಾಂಕ್ ಡಿ'ಕೋಸ್ತ-ಜ್ಯೂಲಿಯೆಟ್ ಡಿ'ಕೋಸ್ತ ದಂಪತಿಯ ಪುತ್ರ.
ಡೆನಿಮ್ ಮೂಡುಬಿದಿರೆಯ ರೋಟರಿ ಆಂಗ್ಲಮಾಧ್ಯಮ ಶಾಲೆ, ಅಲಂಗಾರು ಸೈಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆ, ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಓದಿದ ಡೆನಿಮ್ ಮೈಸೂರಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 'ಮೆಕ್ಯಾನಿಕಲ್ ಇಂಜಿನಿಯರಿಂಗ್' ಪದವಿ ಗಳಿಸಿದರು.
ಡೆನಿಮ್ ಓದು ಸಂಶೋಧನೆಗಳಲ್ಲಿ ತೊಡಗಿದ್ದಂತೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ತಾಯಿಗೆ ಕಿಡ್ನಿ ದಾನ ಮಾಡಿರುವುದು ಅವರ ಮಾತೃಭಕ್ತಿ ಹಾಗೂ ಮಾನವೀಯ ಗುಣವನ್ನು ತಿಳಿಸುತ್ತದೆ. ಟುಮ್ ವಿ.ವಿ.ಯಲ್ಲಿ ಪ್ರೊ.ಡಾ. ಇಂಗ್ ಆಲ್‍ರಿಚ್ ವ್ಯಾಗ್ನರ್ ಅವರು ಡೆನಿಮ್ ಮಾರ್ಗದರ್ಶನ ನೀಡಿದರು.