ಥೈಲ್ಯಾಂಡ್ ರಾಜಕುಮಾರಿ ರಾಜಕೀಯ ಅಖಾಡಕ್ಕೆ: ಪ್ರಧಾನಿ ಚುನಾವಣೆಯಲ್ಲಿ ಸ್ಪರ್ಧೆಗೆ ಉಬೊಲ್‌ರತ್ನ ನಿರ್ಧಾರ
ಬ್ಯಾಂಕಾಕ್,ಫೆ.9: ಥೈಲ್ಯಾಂಡ್‌ನ ದೊರೆ ವಜಿರಲೊಂಗ್‌ಕೊರ್ನ್ ಅವರ ಹಿರಿಯ ಸಹೋದರಿ ಉಬೊಲ್‌ರತ್ನ ರಾಜಕನ್ಯಾ ಸಿರಿವದನ ಬರ್ನಾವದಿ,ತಾನು ರಾಜಕೀಯ ರಂಗಕ್ಕೆ ಧುಮುಕುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಮಾರ್ಚ್ 24ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ, ಮಾಜಿ ಪ್ರಧಾನಿ ತಕ್ಸಿನ್ ಶಿನವಾತ್ರ ನೇತೃತ್ವದ ಥಾಯ್ ರಕ್ಷಾ ಚಾರ್ಟ್ ಪಾರ್ಟಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ತಾನು ಸ್ಪರ್ಧಿಸುವುದಾಗಿ ಆಕೆ ತಿಳಿಸಿದ್ದಾರೆ. ಸೇನೆಯ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿರುವ ಹಾಲಿ ಪ್ರಧಾನಿ ಪ್ರಯೂತ್ ಚಾಂಗ್‌ಚೆಯಾನ್, ಆಕೆಯ ಮುಖ್ಯ ಎದುರಾಳಿಯಾಗಲಿದ್ದಾರೆ.
ಥಾಯ್ ರಾಜಕುಟುಂಬವು ಈವರೆಗೆ ಸಕ್ರಿಯ ರಾಜಕಾರಣದಿಂದ ಅಂತರವನ್ನು ಕಾಯ್ದುಕೊಂಡೇ ಬಂದಿತ್ತು. 2005ರಲ್ಲಿ ನಡೆದ ಸೇನಾ ಕ್ರಾಂತಿಯಲ್ಲಿ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡ ಬಳಿಕ ಥಾಕ್ಸಿನ್ ಶಿನವಾತ್ರ ಥಾಯ್ ರಕ್ಷಾ ಚಾರ್ಟ್ ಪಾರ್ಟಿಯ ಅಧ್ಯಕ್ಷರಾಗಿದ್ದಾರೆ.
ಥಾಯ್ ದೊರೆಯ ಆಶೀರ್ವಾದದೊಂದಿಗೆ, ರಾಜಕುಮಾರಿ ಉಬೊಲ್‌ರತ್ನ ರಾಜಕಾರಣಕ್ಕಿಳಿದಿದ್ದಾರೆಂದು ಹೇಳಲಾಗುತ್ತಿದೆ. 1972ರಲ್ಲಿ ಅಮೆರಿಕ ಪ್ರಜೆಯೊಬ್ಬನನ್ನು ವಿವಾಹವಾದ ಬಳಿಕ ಉಬೊಲ್‌ರತ್ನ ಅರಸೊತ್ತಿಗೆಯಿಂದ ದೂರ ಸರಿದಿದ್ದರು. 26 ವರ್ಷಗಳ ಕಾಲ ಅಮೆರಿಕದಲ್ಲಿ ವಾಸ್ತವ್ಯವಿದ್ದು, ಉಬೊಲ್‌ರತ್ನ 1998ರಲ್ಲಿ ವಿವಾಹವಿಚ್ಛೇದನಗೊಂಡಿದ್ದರು. ಉಬೊಲ್‌ರತ್ನ ಅವರು 2016ರ ಅಕ್ಟೋಬರ್‌ನಲ್ಲಿ ನಿಧನರಾದ ಥಾಯ್ ದೊರೆ ಭೂಮಿಪಾಲ ಅತುಲ್ಯತೇಜ ಅವರ ಹಿರಿಯ ಪುತ್ರಿಯಾಗಿದ್ದಾರೆ.