×
Ad

ಪ್ರೇಮಿಗಳ ದಿನಾಚರಣೆಯಂದು ಕಾನೂನು ಕೈಗೆತ್ತಿಕೊಳ್ಳಲ್ಲ: ಮುತಾಲಿಕ್

Update: 2019-02-10 15:13 IST

ಉಡುಪಿ, ಫೆ.10: ಶ್ರೀರಾಮ ಸೇನೆಯು ಪ್ರೇಮಿಗಳ ದಿನಾಚರಣೆಯಂದು ಪೊಲೀಸರೊಂದಿಗೆ ಕೈ ಜೋಡಿಸುತ್ತದೆ. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಪಾರ್ಕ್, ರಸ್ತೆಗಳಲ್ಲಿ ಯಾವುದೇ ರೀತಿ ಅಸಹ್ಯ, ಅಶ್ಲೀಲ, ಅಸಭ್ಯತೆ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಲಾಗುವುದು. ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳುವುದಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೇಮಿ ಗಳ ದಿನ ಆಚರಣೆಗೆ ನಮ್ಮ ವಿರೋಧ ಇದೆ. ಪಾಶ್ಚಿಮಾತ್ಯರ ‘ಡೇ’ ಸಂಸ್ಕೃತಿ ನಮಗೆ ಬೇಡ. ಇದಕ್ಕೆ ಅವಕಾಶ ನೀಡದಂತೆ ಒತ್ತಾಯಿಸಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಪ್ರೇಮಿಗಳ ದಿನದ ಬಗ್ಗೆ ದುರ್ಗಾ ಸೇನೆ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.

ಪ್ರಸ್ತುತ ರಾಜ್ಯ ರಾಜಕೀಯ ಅಸಹ್ಯಕರವಾಗಿದೆ. ಮೂರು ರಾಜಕೀಯ ಪಕ್ಷ ಗಳನ್ನು ಧಿಕ್ಕರಿಸಿ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ ಎದುರಾಗಿದೆ. ಒಬ್ಬರು ಆಡಿಯೋ ಬಿಡುಗಡೆ ಮಾಡುತ್ತಾರೆ, ಮತ್ತೊಬ್ಬರು ನಾಳೆ ವಿಡಿಯೋ ಬಿಡುಗಡೆ ಮಾಡುತ್ತಾರಂತೆ. ಇವರಲ್ಲಿ ವಿಡಿಯೋ ಇದಿದ್ದರೆ ಮೊದಲೇ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದ ಮುತಾಲಿಕ್, ಬಿಜೆಪಿಯವರು ಇನ್ನೂ ಮಾನನಷ್ಟ ಮೊಕದ್ದಮೆ ಯಾಕೆ ಹಾಕಿಲ್ಲ. ಸತ್ಯ ನಿಮ್ಮ ಪರವಾಗಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದು ಬಿಜೆಪಿಗೆ ಸವಾಲು ಹಾಕಿದರು.

ಬಿಜೆಪಿಯ ಪ್ರಾಮಾಣಿಕತೆ ಹಾಗೂ ಹಿಂದುತ್ವದ ಹೋರಾಟ ಎಲ್ಲಿಗೆ ಹೋಯಿತು. ಕೋಟಿ ಕೋಟಿ ಹಣದ ಡೀಲ್ ವಿಚಾರ ಮಾತನಾಡುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನವರು ನಮ್ಮ ತೆರಿಗೆ ಹಣವನ್ನು ರೆಸಾರ್ಟ್, ಡೀಲ್ಗೆ ದುರುಪಯೋಗ ಮಾಡುತ್ತಿದ್ದಾರೆ ಎಂದು ದೂರಿದ ಅವರು, ಮೋದಿ ನೂರಕ್ಕೆ ನೂರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಇನ್ನೂ ಸುಧಾರಣೆ ಆಗಿಲ್ಲ ಎಂದರು.

ಶ್ರೀರಾಮ ಸೇನೆ ಹಾಗೂ ಮುತಾಲಿಕ್ ರಾಜಕೀಯದಿಂದ ದೂರ ಸರಿದಾ ಗಿದೆ. ನಾವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹೊಲಸು ರಾಜಕಾರಣದಲ್ಲಿ ಪ್ರಾಮಾಣಿಕತೆ, ಹಿಂದುತ್ವಕ್ಕೆ ಜನ ಬೆಂಬಲ ಇಲ್ಲ. ಗೂಂಡಾಗಿರಿ ಮತ್ತು ದುಡ್ಡೇ ಮಾನದಂಡವಾಗಿದೆ. ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡುವುದಾಗಿ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಶ್ರೀಕೃಷ್ಣ ಮಠಕ್ಕೆ ಭೇಟಿ

ಧರ್ಮ ಸಭೆಯಲ್ಲಿ ಭಾಗವಹಿಸಲು ಇಂದು ಉಡುಪಿಗೆ ಆಗಮಿಸಿರುವ ಶ್ರೀ ಪ್ರಮೋದ್ ಮುತಾಲಿಕ್ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣ ನ ದರ್ಶನ ಪಡೆದರು. ಬಳಿಕ ಪರ್ಯಾಯ ಪಲಿಮಾರು ಶ್ರೀಯನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಶ್ರೀ ಮಧುಕರ್ ಮುದ್ರಾಡಿ, ವಿಭಾಗ ಅದ್ಯಕ್ಷ ಜೀವನ್ ನೀರುಮಾರ್ಗ, ಜಿಲ್ಲಾ ಅಧ್ಯಕ್ಷ ಜಯರಾಂ ಅಂಬೆಕಲ್ಲು, ದಿನೇಶ್ ಪಾಂಗಳ, ಯಶವಂತ್ ಮಣಿಪಾಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News