×
Ad

ಸಮುದಾಯದೊಳಗೆ ವ್ಯಾವಹಾರಿಕ ಜಾಲ ಹೆಚ್ಚಿಸುವತ್ತ ಒಲವು

Update: 2019-02-10 18:09 IST

ಮಂಗಳೂರು, ಫೆ.10: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ 'ಬ್ಯಾರಿ ಮೇಳ'ದಲ್ಲಿ ಇಂದು ಯಶಸ್ವಿ ಉದ್ಯಮಿಗಳ ಜತೆ ಸಂವಾದ ಕಾರ್ಯಕ್ರಮ ನಡೆಯಿತು.

ಇದೇ ಮೊದಲ ಬಾರಿಗೆ ಬ್ಯಾರಿ ಸಮುದಾಯದಲ್ಲಿ ಯಶಸ್ವಿ ಉದ್ಯಮಿಗಳ ಸಂವಾದಕ್ಕೆ ಬಿಸಿಸಿಐ ವೇದಿಕೆ ಕಲ್ಪಿಸಿರುವುದು ಉತ್ತಮ ಬೆಳವಣಿಗೆ ಎಂಬ ಅನಿಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶಸ್ವಿ ಉದ್ಯಮಿಗಳಿಂದ ವ್ಯಕ್ತವಾಯಿತು.

ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡಾ. ಸಿ.ಪಿ. ಹಬೀಬ್ ರಹ್ಮಾನ್, ಝಕರಿಯ ಜೋಕಟ್ಟೆ, ಶೇಖ್ ಕರ್ನಿರೆ, ಮುಹಮ್ಮದ್ ಮನ್ಸೂರ್ ಬಹರೈನ್, ರಿಯಾಝ್ ಬಾವಾ, ಖಾಸಿಂ ಅಹ್ಮದ್, ಶಿಹಾಬ್ ಖಲಂದರ್ ಭಾಗವಹಿಸಿ ಉದ್ಯಮ ರಂಗದಲ್ಲಿ ತಮ್ಮ ಯಶಸ್ಸಿನ ಕಿರು ಪರಿಚಯ ನೀಡಿದರು.

ಮಾತ್ರವಲ್ಲದೆ ಸಮುದಾಯದ ಅಭಿವೃದ್ಧಿ ಹಾಗೂ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಉದ್ಯಮ- ವ್ಯಾವಹರಿಕ ಜಾಲವನ್ನು ಇನ್ನಷ್ಟು ಹೆಚ್ಚಿಸುವ ಒಲವು ಯಶಸ್ವಿ ಉದ್ಯಮಿಗಳಿಂದ ವ್ಯಕ್ತವಾಯಿತು. ದೇಶ ಹಾಗೂ ವಿದೇಶದಲ್ಲಿ ಉದ್ಯಮವನ್ನು ನಡೆಸುತ್ತಾ  ಸಾಮಾಜಿಕವಾಗಿಯೂ ಸ್ಪಂದಿಸುತ್ತಿರುವ ಈ ಉದ್ಯಮಿಗಳು ತಮ್ಮ ಉದ್ಯಮರಂಗದ ಅನುಭವಗಳ ಮೂಲಕ ಸಮುದಾಯದ ಯುವ ಉದ್ಯಮಿಗಳಿಗೆ ಪ್ರೇರಣೆ ನೀಡಿದರು.

ಹೊಸ ಉದ್ಯಮದ ಬೆಳವಣಿಗೆಯ ಜತೆಗೆ ಉದ್ಯಮಿಗಳನ್ನು ಸೃಷ್ಟಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಸಂವಾದದಲ್ಲಿ ಬಿಸಿನೆಸ್ ನೆಟ್‍ವರ್ಕ್‍ನಿಂದ ಆಗುವ ಪ್ರಯೋಜನ, ಹೊಸ ಉದ್ಯಮ ಸ್ಥಾಪನೆ, ಉದ್ಯಮ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು, ಭವಿಷ್ಯದ ಸವಾಲುಗಳ ಕುರಿತಂತೆಯೂ ಯಶಸ್ವಿ ಉದ್ಯಮಿಗಳು ಅನುಭವ ಹಂಚಿಕೊಂಡರು.

ಉದ್ಯಮಿ ಎಸ್.ಎಂ. ಬಶೀರ್ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.

''ಸಮುದಾಯದ ಮಧ್ಯಮ ವರ್ಗವನ್ನು ಉದ್ಯಮದಲ್ಲಿ ಯಶಸ್ವಿಯನ್ನಾಗಿಸುವಲ್ಲಿ ಬಂಡವಾಳ ಹೂಡಿಕೆ ಅತೀ ಅಗತ್ಯವಾಗಿದೆ. ಅದರ ಜತೆಯಲ್ಲೇ ಒಬ್ಬರ ಮೇಲೆ ಹೊರೆ ಬೀಳದೆ, ಜತೆಯಾಗಿ ಹೂಡಿಕೆ ಮಾಡಿಕೊಂಡು ಉದ್ಯಮವನ್ನು ನಡೆಸುವುದು ಇಂದಿನ ಅಗತ್ಯತೆ''.
- ಮುಹಮ್ಮದ್ ಮನ್ಸೂರ್, ಉದ್ಯಮಿ. 

''ಹೂಡಿಕೆಯ ಜತೆಯಲ್ಲೇ ಆಯಾ ಪ್ರದೇಶಕ್ಕೆ ಅನುಗುಣವಾದ ಉದ್ಯಮಗಳಿಗೆ ಪ್ರೋತ್ಸಾಹ ನೀಡಿ, ಆ ಉದ್ಯಮಕ್ಕೆ ಪೂರಕವಾದ ಉತ್ಪನ್ನಗಳ ಪೂರೈಕೆ, ಸಂಸ್ಕರಣೆ, ಉತ್ಪಾದನೆಗೆ ಒತ್ತು ನೀಡಬೇಕು. ಉದಾಹರಣೆಗೆ ದ.ಕ. ಜಿಲ್ಲೆಯಲ್ಲಿ ಅಡಿಕೆ, ತೆಂಗು, ಮೀನುಗಾರಿಕೆ ಪ್ರಮುಖ ಉತ್ಪನ್ನ. ಈ ಉತ್ಪನ್ನಗಳಿಗೆ ಬೇಡಿಕೆ ಮತ್ತು ಪೂರೈಕೆಯನ್ನು ಸೃಷ್ಟಿಸುವುದರೊಂದಿಗೆ ಬಿಸಿನೆಸ್ ನೆಟ್‍ವರ್ಕಿಂಗ್ ವ್ಯವಸ್ಥೆಯಾಗಬೇಕು''. 
-ಖಾಸಿಂ ಅಹ್ಮದ್, ಉದ್ಯಮಿ, 

''ಒಟ್ಟಾಗಿ ಸೇರುವುದು ಮತ್ತು ಪರಸ್ಪರ ಹಂಚಿಕೊಳ್ಳುವುದೇ ಬಿಸಿನೆಸ್ ನೆಟ್‍ವರ್ಕಿಂಗ್. ಆಯಾ ಕ್ಷೇತ್ರದಲ್ಲಿನ ವಿಶೇಷತೆಗಳನ್ನು ಪರಸ್ಪರ ಹಂಚಿಕೊಂಡಾಗ ವ್ಯವಹಾರದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ''.
-ಡಾ. ಸಿ.ಪಿ. ಹಬೀಬ್ ರಹಾನ್, ಅಧ್ಯಕ್ಷರು ಹಾಗೂ ವೈದ್ಯಕೀಯ ನಿರ್ದೇಶಕರು, ಯುನಿಟಿ ಆಸ್ಪತ್ರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News