ಕಟ್ಟಡಗಳ ನಿರ್ಮಾಣಕ್ಕೆ ನಿರ್ಭಯಾ ನಿಧಿ ಬಳಕೆ !

Update: 2019-02-10 14:57 GMT

ಹೊಸದಿಲ್ಲಿ,ಫೆ.10: ನಿರ್ಭಯಾ ನಿಧಿಯನ್ನು ಕಟ್ಟಡಗಳ ನಿರ್ಮಾಣಕ್ಕೆ ಬಳಸಿಕೊಂಡಿರುವುದನ್ನು ಬಲವಾಗಿ ಆಕ್ಷೇಪಿಸಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ನೇತೃತ್ವದ ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯು,ಇಂತಹ ಬಳಕೆಗಳು ಯೋಜನೆಯಡಿ ಮಹಿಳಾ ಸುರಕ್ಷತೆಯ ಮುಖ್ಯ ಉದ್ದೇಶವನ್ನೇ ವಿಫಲಗೊಳಿಸುತ್ತವೆ ಎಂದು ಹೇಳಿದೆ.

ಕಟ್ಟಡಗಳ ನಿರ್ಮಾಣಕ್ಕೆ ಹಣ ಇತರ ಮೂಲಗಳಿಂದ ಬರಬೇಕೇ ಹೊರತು ನಿರ್ಭಯಾ ನಿಧಿಯಿಂದಲ್ಲ ಎನ್ನುವುದು ತನ್ನ ದೃಢವಾದ ಅಭಿಪ್ರಾಯವಾಗಿದೆ ಎಂದೂ ಸಮಿತಿಯು ಹೇಳಿದೆ.

ಗೃಹ ಸಚಿವಾಲಯವು ನಿರ್ಭಯಾ ನಿಧಿಯಿಂದ ಕಟ್ಟಡಗಳ ನಿರ್ಮಾಣದಂತಹ ಯೋಜನೆಗಳಿಗೆ ಹಣ ಮಂಜೂರು ಮಾಡಕೂಡದು ಮತ್ತು ಅದು ತನ್ನ ಮೂಲ ಉದ್ದೇಶಕ್ಕೆ ಅಂಟಿಕೊಳ್ಳಬೇಕು ಎಂದು ಸಮಿತಿಯು ಕಟುವಾಗಿ ಹೇಳಿದೆ.

 2012ರಲ್ಲಿ ದೇಶವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿದ್ದ ದಿಲ್ಲಿಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಹಿನ್ನೆಲೆಯಲ್ಲಿ ದೇಶಾದ್ಯಂತ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಅಗತ್ಯ ಉಪಕ್ರಮಗಳ ಜಾರಿಗಾಗಿ 2013ರಲ್ಲಿ ಆಗಿನ ಯುಪಿಎ ಸರಕಾರವು ನಿರ್ಭಯಾ ನಿಧಿಯನ್ನು ಸ್ಥಾಪಿಸಿತ್ತು.

ನಿರ್ಭಯಾ ನಿಧಿಯಿಂದ ಹಣವನ್ನು ಪರಿಹಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡುವುದರಿಂದ ಅದು ಕೇವಲ ವಿತರಣೆ ನಿಧಿಯಾಗುತ್ತದೆ ಮತ್ತು ತಳಮಟ್ಟದಲ್ಲಿ ಮಹಿಳೆಯರ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಸಮಿತಿಯು ಹೇಳಿದೆ.

ಆ್ಯಸಿಡ್ ದಾಳಿ,ಅತ್ಯಾಚಾರ,ಕಳ್ಳಸಾಗಾಣಿಕೆ ಇತ್ಯಾದಿಗಳ ಸಂತ್ರಸ್ತ ಮಹಿಳೆಯರಿಗೆ ಪರಿಹಾರವನ್ನೊದಗಿಸುವ ಕೇಂದ್ರೀಯ ಸಂತ್ರಸ್ತೆಯರ ಪರಿಹಾರ ನಿಧಿ(ಸಿವಿಸಿಎಫ್)ಗೆ ಒಂದು ಬಾರಿಯ ಅನುದಾನವಾಗಿ 200 ಕೋ.ರೂ.ಗಳನ್ನು ಮಂಜೂರು ಮಾಡಿರುವುದನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿರುವ ಸಮಿತಿಯು, ಸಿವಿಸಿಎಫ್ ಯೋಜನೆಯ ಅಗತ್ಯ ಮತ್ತು ಮಹತ್ವವನ್ನು ಪ್ರಶಂಸಿಸಿದೆಯಾದರೂ,ಈ ಯೋಜನೆಗೆ ಬೇರೆ ಮೂಲಗಳಿಂದ ಹಣವನ್ನು ಒದಗಿಸಬಹುದಿತ್ತು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News