‘ಸಂಚಾರಿ ಅಂಗಡಿ’ಗಳಿಗೆ ಅವಕಾಶ ನೀಡಲು ಕೇಂದ್ರ ಸರಕಾರದ ಚಿಂತನೆ

Update: 2019-02-10 14:52 GMT

ಹೊಸದಿಲ್ಲಿ,ಫೆ.10: ಕೇಂದ್ರ ನಗರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ತನ್ನ ರಾಷ್ಟ್ರೀಯ ನಗರ ಜೀವನೋಪಾಯಗಳ ಅಭಿಯಾನ(ಎನ್‌ಯುಎಲ್‌ಎಂ)ದಡಿ ದೇಶದಲ್ಲಿಯ ಬೀದಿ ಮಾರಾಟಗಾರರಿಗಾಗಿ ‘ಸಂಚಾರಿ ಅಂಗಡಿ’ಗಳ ಪರಿಕಲ್ಪನೆಯನ್ನು ಜಾರಿಗೊಳಿಸಿಲು ಚಿಂತನೆ ನಡೆಸುತ್ತಿದೆ ಎಂದು ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ ಮಿಶ್ರಾ ಅವರು ಇಲ್ಲಿ ತಿಳಿಸಿದರು.

ಈ ಯೋಜನೆಯಡಿ ಮಾಲಿಕರಿಗೆ ಸಂಚಾರಿ ಬೀದಿ ಮಾರಾಟದ ಪರವಾನಿಗೆಯನ್ನು ನೀಡಲಾಗುವುದು ಎಂದರು.

ಸಚಿವಾಲಯವು ಇತ್ತೀಚಿಗೆ ಆಯೋಜಿಸಿದ್ದ ‘ಬೀದಿ ಮಾರಾಟಗಾರರರಿಗಾಗಿ ರಾಷ್ಟ್ರೀಯ ಕಾರ್ಯಾಗಾರ’ದಲ್ಲಿ ಈ ಪರಿಕಲ್ಪನೆಯು ಮೂಡಿಬಂದಿತ್ತು. ಸಚಿವಾಲಯವು ಈ ಸಲಹೆಯನ್ನು ಪರಿಗಣಿಸಲಿದೆ ಮತ್ತು ಸಂಚಾರಿ ಅಂಗಡಿಗಳಿಗೆ ಆರ್ಥಿಕ ನೆರವನ್ನು ಒದಗಿಸಲು ಮಾರ್ಗವನ್ನು ಕಂಡುಕೊಳ್ಳಲಿದೆ ಎಂದು ಅವರು ತಿಳಿಸಿದರು.

2014ರ ಬೀದಿ ಮಾರಾಟಗಾರರ ಕಾಯ್ದೆಯಡಿ ಈವರೆಗೆ ದೇಶಾದ್ಯಂತ 2,430 ನಗರಗಳಲ್ಲಿ 18 ಲಕ್ಷ ಬೀದಿ ಮಾರಾಟಗಾರರನ್ನು ಗುರುತಿಸಲಾಗಿದೆ. ಅಲ್ಲದೆ 2,344 ‘ಬೀದಿ ಮಾರಾಟಗಾರರ ಸಮಿತಿ’ಗಳನ್ನು ರಚಿಸಲಾಗಿದೆ ಮತ್ತು ಒಂಭತ್ತು ಲಕ್ಷ ಬೀದಿ ಮಾರಾಟಗಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಬೀದಿ ಮಾರಾಟಗಾರರು ಸಮಾಜಕ್ಕೆ ವಿವಿಧ ಸೇವೆಗಳನ್ನು ಒದಗಿಸುತ್ತಿರುವದರಿಂದ ಅವರಿಗೆ ರಕ್ಷಣೆಯ ಅಗತ್ಯವಿದೆ ಎಂದು ಮಿಶ್ರಾ ತಿಳಿಸಿದರು.

ಶುಕ್ರವಾರ ನಡೆದ ಕಾರ್ಯಾಗಾರದಲ್ಲಿ ಬೀದಿ ಮಾರಾಟಗಾರರ ಕಾಯ್ದೆಯ ಜಾರಿ ಕುರಿತು ಎನ್‌ಜಿಒ ಸೆಂಟರ್ ಫಾರ್ ಸಿವಿಲ್ ಸೊಸೈಟಿಯು ಸಿದ್ಧಪಡಿಸಿದ ಪ್ರಗತಿ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಕಾಯ್ದೆಯ ಜಾರಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ ನಾಗಾಲ್ಯಾಂಡ್ ಕೊನೆಯ ಸ್ಥಾನದಲ್ಲಿದೆ.

ಕರ್ನಾಟಕ,ಮಣಿಪುರ,ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ಕಾಯ್ದೆಯ ಕಳಪೆ ಪಾಲನೆಯ ರಾಜ್ಯಗಳ ವರ್ಗದಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News