ಓಲಾ, ಉಬರ್ 2 ದಶಲಕ್ಷ ಉದ್ಯೋಗ ಸೃಷ್ಟಿಸಿದೆ ಎಂದ ನೀತಿ ಆಯೋಗ: ಉಬರ್ ಚಾಲಕ ಪ್ರತಿಕ್ರಿಯಿಸಿದ್ದು ಹೀಗೆ…

Update: 2019-02-10 15:11 GMT

ಹೊಸದಿಲ್ಲಿ, ಫೆ. 10: ಉದ್ಯೋಗ ಸೃಷ್ಟಿ ವಿಷಯದ ಕುರಿತು ರವಿವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅಸಮರ್ಥತೆಯೊಂದಿಗಿನ ಅಹಂಕಾರ ಕೇಂದ್ರ ಸರಕಾರವನ್ನು ‘‘ನೈತಿಕ ದಿವಾಳಿತನದ ಜ್ವಲಂತ ನಿದರ್ಶನ’’ ಎಂದಿದ್ದಾರೆ.

“ಸರಕಾರ ಉದ್ಯೋಗ ನೀಡಲಿಲ್ಲ. ಲಕ್ಷಾಂತರ ರೂಪಾಯಿ ವ್ಯಯಿಸಿ ಉದ್ಯೋಗ ಕಂಡುಕೊಂಡೆ” ಎಂದು ಉಬರ್ ಚಾಲಕನೋರ್ವ ನೀಡಿದ ಹೇಳಿಕೆಯ ವರದಿಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.

 ಓಲಾ/ಉಬರ್ ಎರಡು ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬ ನೀತಿ ಆಯೋಗದ ಹೇಳಿಕೆಯ ವರದಿ ಬಗ್ಗೆ ಪ್ರಶ್ನಿಸಿದಾಗ ಚಾಲಕ ಈ ಹೇಳಿಕೆ ನೀಡಿದ್ದರು. ನಿರುದ್ಯೋಗ ಸಮಸ್ಯೆ ಬಗ್ಗೆ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ವರ್ಷದಲ್ಲಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆ ಈಡೇರಿಸಿಲ್ಲ ಎಂದು ಅವರು ಆಗಾಗ ಆರೋಪಿಸುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ 45 ವರ್ಷಗಳಲ್ಲೇ ಅತಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ ವರದಿಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News